ಮಂಡ್ಯ: ಮರ್ಯಾದ ಹತ್ಯೆ ಪ್ರಕರಣ; 6 ಆರೋಪಿಗಳ ಬಂಧನ

Update: 2018-11-20 14:54 GMT

ಮಂಡ್ಯ, ನ.20: ಮಳವಳ್ಳಿ ತಾಲೂಕಿನ ಶಿವನಸಮುದ್ರದ ಎಸ್‍ಬಿಆರ್ ಕೆರೆಯಲ್ಲಿ ಪತ್ತೆಯಾದ ಪ್ರೇಮಿಗಳ ಶವದ ಸಂಬಂಧ ಬೆಳಕವಾಡಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕೆರೆಯಲ್ಲಿ ಪತ್ತೆಯಾದ ಶವಗಳು ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಹೊಸರೂ ತಾಲೂಕಿನ ಚೂಡಗಾನಪಲ್ಲಿ ಗ್ರಾಮದ ನಂದಿಶ್ ಮತ್ತು ಸ್ವಾತಿ ಎಂಬ ಪ್ರೇಮಿಗಳದಾಗಿದ್ದು, ಇದು ಮರ್ಯಾದೆ ಹತ್ಯೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಎಸ್ಪಿ ಡಿ.ಶಿವಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಬೇಧಿಸುವಲ್ಲಿ ಹಲಗೂರು ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾತಿಯ ತಂದೆ ಶ್ರೀನಿವಾಸ್, ದೊಡ್ಡಪ್ಪಂದಿರಾದ ವೆಂಕಟೇಶ್, ಅಶ್ವಥ್, ಚಿಕ್ಕಪ್ಪ ವೆಂಕಟರಾಮು, ಸಂಬಂಧಿ ಕೃಷ್ಣಸ್ವಾಮಿ, ಸ್ನೇಹಿತ ಲಕ್ಷ್ಮಣ್ ಎಂಬವರನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ವಾಮಿನಾಥನ್ ತಲೆಮರೆಸಿಕೊಂಡಿದ್ದಾನೆ ಎಂದು ಅವರು ಹೇಳಿದರು.

ತಿಗಳ ಸಮುದಾಯದ ಸ್ವಾತಿ ಹಾಗೂ ಅದೇ ಗ್ರಾಮದ ಪರಿಶಿಷ್ಟ ಜಾತಿಯ ಯುವಕ ನಂದೀಶ ಒಂದು ವರ್ಷದಿಂದ  ಪರಸ್ಪರ ಪ್ರೀತಿಸುತ್ತಿದ್ದು, ಪೋಷಕರ ವಿರೋಧದ ನಡುವೆಯೂ ಮದುವೆಯಾಗಿ ಹೊಸೂರಿನಲ್ಲಿ ವಾಸವಾಗಿದ್ದರು. ಇಬ್ಬರನ್ನು ಪತ್ತೆಹಚ್ಚಿದ ಸ್ವಾತಿ ತಂದೆ ಮತ್ತು ಸಂಬಂಧಿಗಳು ಇಬ್ಬರನ್ನು ಟಾಟಾ ಸುಮೋದಲ್ಲಿ ಕರೆತಂದು ಕೊಲೆ ಮಾಡಿ ಶಿವನಸಮುದ್ರ ಬಳಿ ಕೆರೆಗೆ ಎಸೆದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News