ಸಂಸದ ನಳೀನ್‌ ಸೇರಿ ಹಲವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

Update: 2018-11-20 16:41 GMT
ಸಂಸದ ನಳೀನ್‌ ಕುಮಾರ್ ಕಟೀಲ್

ಬೆಂಗಳೂರು, ನ.20: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಾಜ್ಞೆ ಉಲ್ಲಂಘಿಸಿ ಭಾಷಣ ಮಾಡಿದ ಮಂಗಳೂರು ಸಂಸದ ನಳೀನ್‌ ಕುಮಾರ್ ಕಟೀಲ್ ಸೇರಿ 14 ಬಿಜೆಪಿ ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಸಂಬಂಧ ಎಫ್‌ಐಆರ್ ರದ್ದುಕೋರಿ ಸಂಸದ ನಳೀನ್‌ ಕುಮಾರ್ ಕಟೀಲ್ ಸೇರಿ 14 ಜನರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿತು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯನ್ನು ಖಂಡಿಸಿ ಸಂಸದ ನಳೀನ್‌ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ, ಕಲ್ಲಡ್ಕ ಪ್ರಭಾಕರ್, ರಾಜೇಶ್ ನಾಯ್ಕ್, ಸಂಜೀವ ಮಠಂದೂರ್, ಸುನೀಲ್‌ ಕುಮಾರ್ ಸೇರಿ 14 ಬಿಜೆಪಿ ನಾಯಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಭಾಷಣ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಬಂಟ್ವಾಳ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.

ಬಿ.ಸಿ.ರೋಡ್‌ನಲ್ಲಿ ಅಂಗಡಿ ಹೊಂದಿದ್ದ ಶರತ್ ಮಡಿವಾಳ ಅವರನ್ನು ದುಷ್ಕರ್ಮಿಗಳು ಹಾಡುಹಗಲೇ ತಲವಾರಿನಿಂದ ಕಡಿದು ಹತ್ಯೆಗೈಯಲು ಯತ್ನಿಸಿದ್ದರು. ಗಂಭೀರ ಗಾಯಗೊಂಡಿದ್ದ ಶರತ್ ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News