ಟಿಪ್ಪು ಸಮಾಧಿಗೆ ವಾಟಾಳ್ ನಾಗರಾಜ್ ಪಷ್ಪ ನಮನ: ಸಂಸತ್‍ನಲ್ಲಿ ಪ್ರತಿಮೆ ಸ್ಥಾಪನೆಗೆ ಒತ್ತಾಯ

Update: 2018-11-20 17:20 GMT

ಶ್ರೀರಂಗಪಟ್ಟಣ, ನ.20: ದೆಹಲಿಯ ಸಂಸತ್ ಭವನದ ಎದುರು ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ.

ಟಿಪ್ಪು ಜನ್ಮದಿನಾಚರಣೆ ಅಂಗವಾಗಿ ಮಂಗಳವಾರ ಪಟ್ಟಣದ ಟಿಪ್ಪು ಸಮಾಧಿಗೆ ಪುಷ್ಪ ನಮನ ಸಲ್ಲಿಸಿ, ಮಾತನಾಡಿದ ಅವರು, ಶ್ರೀರಂಗಪಟ್ಟಣ ಐತಿಹಾಸಿಕ ಹಿನ್ನೆಲೆಯುಳ್ಳ ಪ್ರದೇಶವಾಗಿದೆ. ಟಿಪ್ಪು ಸಾವನ್ನಪ್ಪಿದ ಸ್ಥಳ, ಶ್ರೀರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ಪಟ್ಟಣವನ್ನು ಪುರಾತತ್ವ ಇಲಾಖೆ, ಕೇಂದ್ರ ಮತ್ತು ರಾಜ್ಯ ಸಕಾರಗಳು ಅಭಿವೃದ್ಧಿಪಡಿಸಿ, ಇಡೀ ಪ್ರಪಂಚವೇ ಗಮನ ಸೆಳೆಯುವಂತೆ ಮಾಡಬೇಕು ಎಂದರು.

ಟಿಪ್ಪು ಜನ್ಮ ಸ್ಥಳ ದೇವನಹಳ್ಳಿಯನ್ನು ಅಭಿವೃದ್ದಿಪಡಿಸಬೇಕು. ಟಿಪ್ಪು ಹೆಸರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಜಾತ್ಯತೀತ ಹೋರಾಟಗಾರ ಪ್ರಶಸ್ತಿ ಸ್ಥಾಪಿಸಿ, ಪ್ರತಿ ವರ್ಷ ದೇಶಾದ್ಯಂತ ಟಿಪ್ಪು ಜಯಂತಿ ಆಚರಿಸಿ, 1 ಕೋಟಿ ನಗದು ಜೊತೆಗೆ ಪ್ರಶಸ್ತಿ ನೀಡುವ ಕೆಲಸವನ್ನು ರಾಜ್ಯ ಸರಕಾರ ಮಾಡಲಿ ಎಂದು ಅವರು ಒತ್ತಾಯಿಸಿದರು.

ಡಿಸ್ನಿಲ್ಯಾಂಡ್‍ಗೆ ವಿರೋಧ: ಕೆಆರ್ ಎಸ್‍ನಲ್ಲಿ ಡಿಸ್ನಿಲ್ಯಾಂಡ್ ನಿರ್ಮಿಸಿ, 130 ಅಡಿ ಎತ್ತರದ ಕಾವೇರಿ ಪ್ರತಿಮೆ ನಿರ್ಮಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಅವರು, ಪ್ರತಿಮೆ ನಿರ್ಮಿಸಲು 60ರಿಂದ 70 ಅಡಿ ಗುಂಡಿ ತೆಗೆಯಬೇಕು. ಇದರಿಂದ ಅಣೆಕಟ್ಟೆಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ಶ್ರೀರಂಗಪಟ್ಟಣ, ಮಂಡ್ಯ ಅಥವಾ ಮೈಸೂರಿನಲ್ಲಿ ಪ್ರತಿಮೆ ನಿರ್ಮಿಸಲಿ ಎಂದರು.

ಯಾವುದೇ ಕಾರಣಕ್ಕೂ ಡಿಸ್ನಿಲ್ಯಾಂಡ್ ನಿರ್ಮಿಸಬಾರದು. ಕೆಆರ್‍ಎಸ್ ಬೃಂದಾವನದ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. 15 ದಿನಗಳೊಳಗೆ ಯೋಜನೆಯನ್ನು ಕೈಬಿಡುವ ಬಗ್ಗೆ ಸರಕಾರ ನಿರ್ಧಾರ ಪ್ರಕಟಿಸಬೇಕು. ಈ ಯೋಜನೆಯ ವಿರುದ್ಧ ಮುಂದಿನ ವಾರ ಕೆಆರ್‍ಎಸ್‍ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.

ರೈತರ ಹೋರಾಟಕ್ಕೆ ಬೆಂಬಲ: ಕಬ್ಬಿನ ದರ ನಿಗದಿ, ಬಾಕಿ ಪಾವತಿಗೆ ಒತ್ತಾಯಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಾಟಾಳ್ ಪಕ್ಷ ಬೆಂಬಲ ನೀಡಲಿದೆ. ಶೇ.50ರಷ್ಟು ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳಿಗೆ ಸೇರಿವೆ. ಅವರ ರಕ್ಷಣೆಗಾಗಿ ರೈತರನ್ನು ಕಡೆಗಣನೆ ಮಾಡುತ್ತಿರುವುದು ಸರಿಯಿಲ್ಲ. ಸರಕಾರ ಪ್ರಾಮಾಣಿಕತೆಯಿಂದ ಒಂದು ಗಂಟೆಯೊಳಗೆ ಪರಿಹಾರ ಮಾಡಬಹುದು. ರೈತರ ಬಾಕಿ ಹಣ ಪಾವತಿಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತರ ಬಗ್ಗೆ ಹೀನಾಯವಾಗಿ ಮಾತನಾಡುವುದು ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆ ರೌಡಿಸಂ ಪ್ರಜಾಪ್ರಭುತ್ವವಾಗಿದೆ. ಕೆಲ ಮಂತ್ರಿಗಳು, ಶಾಸಕರು ರೌಡಿಸಂ ಮಾಡುವುದಿಲ್ಲ ಎನ್ನಲಾಗದು. ರೈತರ ಬಗ್ಗೆ ಸಣ್ಣತನದಲ್ಲಿ ಯೋಚನೆ ಮಾಡುವುದು ಸರಿಯಲ್ಲ. 15 ದಿನಗಳೊಳಗೆ ರೈತರ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದಲ್ಲಿ ರೈತರ ಜೊತೆಗೂಡಿ ಕರ್ನಾಟಕ ಬಂದ್‍ಗೆ ಕರೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.

ಮುಖಂಡರಾದ ಪಿ.ಪಿ.ಪ್ರಸನ್ನ ಕುಮಾರ್, ಗಿರೀಶ್‍ಗೌಡ, ಸತೀಶ್, ಪಾರ್ಥಸಾರಥಿ, ಮುಬಾರಕ್ ಪಾಷ, ನಾರಾಯಣಸ್ವಾಮಿ, ರಾಮು, ಸಮೀರ್, ರೇಣುಕಾ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News