ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರಕಾರಗಳ ಕರ್ತವ್ಯ: ಎಚ್.ಎಸ್.ದೊರೆಸ್ವಾಮಿ

Update: 2018-11-20 17:25 GMT

ಮಂಡ್ಯ, ನ.20: ಭೂಮಿ, ವಸತಿ, ಮೂಲಭೂತ ಸೌಕರ್ಯಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ ಕಾರ್ಯಕರ್ತರು ಮಂಗಳವಾರ ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್‍ನಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ಸಮೀಪ ಧರಣಿ ನಡೆಸಿದರು.

ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ.ಎಚ್.ಎಸ್.ದೊರೆಸ್ವಾಮಿ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಪ್ರತಿಯೊಬ್ಬರಿಗೂ ಭೂಮಿ, ವಸತಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರಕಾರಗಳ ಕರ್ತವ್ಯವಾಗಿದೆ ಎಂದರು.

ಮೂರು ವರ್ಷದ ಹಿಂದೆ ರಾಜ್ಯಮಟ್ಟದಲ್ಲಿ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮೂಲಕ ಹತ್ತಾರು ಹೋರಾಟಗಳನ್ನು ಮಾಡಲಾಗಿದೆ. ಭೂಮಿ, ನಿವೇಶನ, ಮನೆ ಕಟ್ಟಿಕೊಡಬೇಕೆಂಬುದು ನ್ಯಾಯಯುತ ಬೇಡಿಕೆಗಳಾಗಿವೆ. ಸಮಾಜದಲ್ಲಿ ಬದುಕುವ ಹಕ್ಕು ಕೇಳುತ್ತಿದ್ದೇವೆ. ಅವಕಾಶ ಕೊಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು.

ನಮ್ಮ ರಾಜ್ಯದಲ್ಲಿ ಭೂಮಿ, ವಸತಿ ಹಕ್ಕು ವಂಚಿತರಾಗಿರುವ ಜನರ ಸಂಖ್ಯೆ ದೊಡ್ಡದಿದೆ. ಭೂಮಿ, ವಸತಿ, ಮೂಲಭೂತ ಸೌಕರ್ಯ ಕೊಡಿಸಲು ಸಮಿತಿ ರಚನೆಯಾಗಿದ್ದು, ಎಲ್ಲ ವಂಚಿತರಿಗೂ ಸೌಲಭ್ಯಗಳನ್ನು ಕೊಡಿಸುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

ಹೋರಾಟಗಾರ ಸಿರಿಮನೆ ನಾಗರಾಜು ಮಾತನಾಡಿ, ಶ್ರೀಮಂತರ ಪರ ಇರುವ ಸರಕಾರಗಳು ಬಡವರನ್ನು ನಿರ್ಲಕ್ಷ್ಯ ಮಾಡುತ್ತಿವೆ. ಇದಕ್ಕೆ ಹೆದರಬಾರದು. ಎಲ್ಲೆಲ್ಲಿ ಸರಕಾರಿ ಭೂಮಿ ಇದಿಯೋ ಅಲ್ಲಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸಲು ಮುಂದಾಗಬೇಕು ಎಂದು ಸಲಹೆ ನೀಡಿದರು. ಭೂಮಿ, ವಸತಿ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಕಳೆದ ವಾರದಿಂದ 18 ಜಿಲ್ಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಡವರು ಮತ್ತಷ್ಟು ಜಾಗೃತರಾಗಬೇಕು. ತಮ್ಮ ಹಕ್ಕುಗಳನ್ನು ಪಡೆಯಲು ಯಾವುದೇ ಹೋರಾಟಕ್ಕೂ ಸಿದ್ಧರಿರಬೇಕು ಎಂದು ಅವರು ಹೇಳಿದರು.

ವಕೀಲ ಬಿ.ಟಿ.ವಿಶ್ವನಾಥ್ ಮಾತನಾಡಿ, ಅಂಬಾನಿಗೆ 280 ಎಕರೆ, ಅದಾನಿಗೆ ಎರಡು ಸಾವಿರ ಎಕರೆ, ಖೇಣಿಗೆ 10 ರೂ.ಗೆ ಬಾಡಿಗೆ ಭೂಮಿ ನೀಡಲು ಸಿದ್ಧವಿರುವ ಸರಕಾರಗಳು ಬೆವರು ಸುರಿಸಿ ಕಷ್ಟಪಡುವ ಬಡವರಿಗೆ ಭೂಮಿ ನೀಡುವುದಿಲ್ಲ. ಇದನ್ನು ಪ್ರಶ್ನೆಮಾಡುವ ಮನೋಭಾವ ಎಲ್ಲರಿಗೂ ಬರಬೇಕು. ತಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆದುಕೊಳ್ಳಲು ಕಾನೂನಾತ್ಮಕ ಹೋರಾಟ ನಡೆಬೇಕೆಂದರು.

ಭೂಮಿ ಮತ್ತು ವಸತಿ ಹೋರಾಟ ಸಮಿತಿಯ ಗುಳಘಟ್ಟ ಶಿವಕುಮಾರ್, ಕರ್ನಾಟಕ ಜನಶಕ್ತಿಯ  ಸಿದ್ದರಾಜು, ಎನ್.ನಾಗೇಶ್, ಸುಬ್ರಮಣ್ಯ, ಮರಿಯಪ್ಪ, ನೀಲಮ್ಮ, ಚಂದ್ರಶೇಖರ್, ಮಂಜುನಾಥ್, ಪ್ರಕಾಶ್, ಮದ್ದೂರು ಚಂದ್ರು, ಹಕ್ಕಿ-ಪಿಕ್ಕಿ ಸಮುದಾಯದ ಮುಖಂಡ ಆನುವಾಳು, ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News