ಕ್ಷೇತ್ರದ ಅಭಿವೃದ್ಧಿ ಮೂಲಕ ವಿರೋಧಿಗಳ ಟೀಕೆಗೆ ಉತ್ತರ: ಶಾಸಕ ರಾಜೇಗೌಡ

Update: 2018-11-20 18:18 GMT

ಜಯಪುರ, ನ.20: ರಾಜಕೀಯೇತರ ಕಾರ್ಯಕ್ರಮಗಳಲ್ಲೂ ನಮ್ಮ ಅಭಿವೃದ್ಧಿ ಕಾರ್ಯದ ಬಗ್ಗೆ ಕೆಲವರು ಇಲ್ಲ ಸಲ್ಲದ ಟೀಕೆ ಮಾಡುತ್ತಿದ್ದು, ಅಂತಹವರಿಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವ ಮೂಲಕ ಉತ್ತರ ನೀಡುತ್ತಿದ್ದೇನೆ ಎಂದು ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ರವಿವಾರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ಸಹಕಾರಿ ಸಂಘಗಳು ಹಾಗೂ ವಿವಿಧ ಸೌಹಾರ್ಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ 65ನೇ ವರ್ಷದ ಅಖಿಲ ಭಾರತ ಸಹಕಾರಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದ ಅವರು,  ರೈತಪರ ಕಾಳಜಿಯಿಂದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮೇಲಿನ 46 ಸಾವಿರ ಕೋಟಿ ಸಾಲ ಸರ್ಕಾರ ಮನ್ನಾ ಮಾಡುವ ನಿರ್ಧಾರ ಮಾಡಿದ್ದು, ಮುಂದಿನ 5 ವರ್ಷ ಅವಧಿಯಲ್ಲಿ ರಸ್ತೆ, ನೀರು, ವಿದ್ಯುತ್ ಮತ್ತು ಫಲಾನುಭವಿಗಳಿಗೆ ಹಕ್ಕುಪತ್ರ ಸೇರಿದಂತೆ ಹಲವಾರು ಜನಪರ ಕೆಲಸಗಳನ್ನು ಮಾಡಲು ಶ್ರಮಿಸುತ್ತೇನೆ. ಸಹಕಾರಿ ಕೇಂದ್ರಗಳಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಯಂತ್ರೋಪಕರಣಗಳು, ರಾಸಾಯನಿಕ ಗೊಬ್ಬರ ಖರೀದಿಗೆ ಸಾಲ ನೀಡುತ್ತಿವೆ. ರೈತರು ಸಹಕಾರ ಸಂಸ್ಥೆಗಳು ನಮ್ಮದು ಎಂಬ ಭಾವನೆಯಿಂದ ಸಾಲ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಬೇಕೆಂದರು.

ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪವಿರಬಾರದು. ಜಿಲ್ಲೆಯ 14 ಸಾವಿರ ಸ್ತ್ರೀಶಕ್ತಿ ಸಂಘಗಳ ಮೂಲಕ ಮಹಿಳೆಯರ ಅಭಿವೃದ್ಧಿಗೆ 80 ಕೋಟಿ ಸಾಲವನ್ನು ನಮ್ಮ ಬ್ಯಾಂಕ್‍ನಿಂದ ನೀಡಿದ್ದು, ಹೆಚ್ಚಿನ ಮೊತ್ತದ ಬಡ್ಡಿ ರಹಿತ ಸಾಲ ನೀಡುವ ಇರಾದೆ ನಮ್ಮದಾಗಿದ್ದರೂ, ಇದಕ್ಕೆ ನಬಾರ್ಡ್ ಸಂಸ್ಥೆ ಸಹಕಾರ ನೀಡುವ ಅಗತ್ಯವಿದೆ ಎಂದರು.

ಶೃಂಗೇರಿ, ಕೊಪ್ಪ ಹಾಗೂ ಎನ್.ಆರ್.ಪುರ ತಾಲ್ಲೂಕಿನ ರೈತರು ಕೃಷಿ ಅಭಿವೃದ್ಧಿಗೆ ಪಡೆದ ಸಾಲವನ್ನು ಸಕಾಲದಲ್ಲಿ ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿದ್ದಾರೆ. ರೈತರಿಂದ ಶೇಕಡಾ 90ರಷ್ಟು ಸಾಲ ವಸೂಲಾತಿ ಆದರೆ ಮಾತ್ರ ನಬಾರ್ಡ್ ಸಾಕಷ್ಟು ಹಣ ಬಿಡುಗಡೆ ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಯಪುರ ಪಿಎಸಿಎಸ್ ಅಧ್ಯಕ್ಷ ಡಿ.ಬಿ.ರಾಜೇಂದ್ರ, ರಾಜ್ಯ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಕು. ಬಿ.ಸಿ.ಗೀತಾ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಸುಜಾತಾ, ತಾ.ಪಂ. ಅಧ್ಯಕ್ಷೆ ಜಯಂತಿ, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎ.ವಿವೇಕ್, ಕೊಪ್ಪ ಟಿಎಪಿಸಿಎಂಎಸ್ ಅಧ್ಯಕ್ಷ ಕೆ.ವಿ.ವಿಜಯರಂಗ, ಕೆ.ಎಸ್.ರವೀಂದ್ರ, ಚಿಕ್ಕದಡಿ ಲಕ್ಷ್ಮೀನಾರಯಣ, ರೇಣುಕಾ ವೆಂಕಟೇಶ್, ಕೊಪ್ಪ ಸಹಕಾರ ಸಾರಿಗೆ ಅಧ್ಯಕ್ಷ ಈ.ಎಸ್.ಧರ್ಮಪ್ಪ, ಹೇರೂರು ಪಿಎಸಿಎಸ್ ಅಧ್ಯಕ್ಷ ಎ.ಕೆ.ಈರೇಗೌಡ, ಎಚ್.ಎಂ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

ಬೆಳವಾಡಿಯ ರಚನಾ, ವಚನಾ ಪ್ರಾರ್ಥಿಸಿ, ರಾಜೇಶ್ ಸ್ವಾಗತಿಸಿದರು. ಮಾ.ಚ. ಪರಮೇಶ್ವರ್ ನಿರೂಪಿಸಿ, ಹೇರೂರು ಪಿಎಸಿಎಸ್ ಸಿಇಒ ಕೆ.ಪಿ.ವಿಶ್ವನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News