ಏಕಭಾಷಾ ಹೇರಿಕೆಯಿಂದ ಪ್ರದೇಶಿಕ ಭಾಷೆಗಳಿಗೆ ಪೆಟ್ಟು: ವಿ.ಪ.ಸದಸ್ಯ ಧರ್ಮೇಗೌಡ

Update: 2018-11-20 18:26 GMT

ಚಿಕ್ಕಮಗಳೂರು, ನ.20: ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಎಂದು ಅಂಗಲಾಚುವ ಸ್ಥಿತಿಗೆ ನಾವು ಬಂದು ತಲುಪಿರುವುದು ವಿಪರ್ಯಾಸ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಉಳಿವಿಗೆ ಪ್ರತಿನಿತ್ಯ ಹೋರಾಟಗಳು ನಡೆಯುತ್ತಿರುವುದು ಆತಂಕಕಾರಿ. ಪ್ರಾದೇಶಿಕ ಭಾಷೆಗಳ ಅವನತಿಗೆ ಕಾರಣವಾಗಿರುವ ಶಕ್ತಿಗಳನ್ನು ಗುರುತಿಸುವಲ್ಲಿ ಕನ್ನಡಿಗರು ಜಾಗೃತರಾದರೆ ಕನ್ನಡಕ್ಕೆ ಇಂತಹ ಸಂದಿಗ್ಧ ಸ್ಥಿತಿ ಬರುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಅಭಿಪ್ರಾಯಿಸಿದ್ದಾರೆ. 

ಮಂಗಳವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡಿಗರ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡು, ನುಡಿ, ಜಲ ಸಂರಕ್ಷಿಸುವ ಕೆಲಸದಲ್ಲಿ ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಅರಿತು ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡಿಗರನ್ನು ಎಚ್ಚರಿಸುವ ಕೆಲಸ ಸದಾ ನಡೆಯಬೇಕೆಂದು ಕರೆ ನೀಡಿದರು. ಏಕಭಾಷಾ ನೀತಿ ಹೇರಿಕೆಯ ಸಂಚು ಪ್ರಾದೇಶಿಕ ಭಾಷೆಗಳ ಅಳಿವಿಗೆ ಕಾರಣವಾಗುತ್ತಿದ್ದು, ಇಂತಹ ಜನವಿರೋಧಿ ನೀತಿಗಳ ಬಗ್ಗೆ ಕನ್ನಡ ಸಂಘಟನೆಗಳು ಸದಾ ಜಾಗೃತರಾಗಿರಬೇಕು. ಕನ್ನಡ ಭಾಷೆ ಅಳಿವಿನಂಚಿಗೆ ಬರಲು ನಾವೇ ಕಾರಣ. ಎಲ್ಲಾ ಭಾಷೆಗಳನ್ನು ಪ್ರೀತಿಸೋಣ, ಕಲಿಯೋಣ, ಆದರೆ ನಮ್ಮ ತಾಯಿ ನುಡಿಯ ಬಗ್ಗೆ ನಮ್ಮಲ್ಲಿರುವ  ಕೀಳರಿಮೆಯನ್ನು ಮೊದಲು ಬಿಟ್ಟು ಕನ್ನಡ ಉಳಿವಿಗೆ ಹೋರಾಡೋಣ ಎಂದರು.

ಸಿಪಿಐ ಮುಖಂಡ ಅಮ್ಜದ್ ಮಾತನಾಡಿ, ಜಾಗತೀಕರಣದಿಂದ ದೇಶದ ಪ್ರದೇಶಿಕ ಭಾಷೆಗಳಿಗೆ ಅಳಿವು ಉಳಿವಿನ ಪ್ರಶ್ನೆ ಎದುರಾಗಿದೆ. ದೇಶದ ಒಳಗೆ ಕನ್ನಡ ಭಾಷೆ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳ ಅವನತಿಗೆ ಕೇಂದ್ರ ಸರಕಾರದ ಏಕಭಾಷಾ ನೀತಿಯ ಹೇರಿಕೆ ಕಾರಣವಾಗುತ್ತಿದೆ. ಹಿಂದಿಯನ್ನು ಏಕಭಾಷೆಯನ್ನಾಗಿ ಹೇರುವ ನೀತಿ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕಿದೆ ಎಂದರು. 

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಡಿ.ಎಲ್.ವಿಜಯ್‍ಕುಮಾರ್ ಮಾತನಾಡಿ, ಕನ್ನಡ ಏಕೀಕರಣ ದೊಡ್ಡ ಇತಿಹಾಸ ಹೊಂದಿದೆ. ಆದರೆ ಎಲ್ಲೋ ಒಂದು ಕಡೆ ಕನ್ನಡ ಭಾಷೆ ಅಳಿವಿನ ಅಂಚಿಕೆ ಸರಿಯುತ್ತಿದೆ. ಅಳಿವಿನ ಅಂಚಿಗೆ ಸರಿಯುತ್ತಿರುವ ಭಾಷೆಯನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ ಎಂದ ಅವರು, ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೆ. ಕನ್ನಡ ನಿತ್ಯೋತ್ಸವವಾಗಬೇಕೆಂದರು.

ಬಿಎಸ್ಪಿ ಮುಖಂಡ ಕೆ.ಟಿ.ರಾಧಕೃಷ್ಣ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿರುವಷ್ಟು ಕನ್ನಡ ಸಂಘಟನೆಗಳನ್ನು ಬೇರೆ ಯಾವ ರಾಜ್ಯದಲ್ಲಿಯೂ ನೋಡಲು ಸಾಧ್ಯವಿಲ್ಲ. ಆದರೂ ಕನ್ನಡಕ್ಕೆ ಕುತ್ತು ಬಂದಿದೆ. ಅಂಕಿ ಅಂಶಗಳ ಪ್ರಕಾರ ಪ್ರತಿಶತ 10 ಜನಕ್ಕೆ 4 ಜನರು ಬೇರೆ ಭಾಷೆ ಮಾತನಾಡುವ ಜನರಿದ್ದಾರೆ ಎಂದು ವಿಷಾದಿಸಿದರು.

ನಗರಸಭೆ ಅಧ್ಯಕ್ಷೆ ಶಿಲ್ಪಾರಾಜಶೇಖರ್ ಮಾತನಾಡಿ, ಕನ್ನಡ ನಿತ್ಯದ ಭಾಷೆಯಾಗಬೇಕು. ಇತರ ಭಾಷೆಗಳು ವ್ಯವಹಾರಿಕ ಭಾಷೆಯಾಗಿ ಬಳಕೆಯಾಗಬೇಕು. ಆಗ ಮಾತ್ರ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು. 

ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಬಣದ ರಾಜ್ಯಾಧ್ಯಕ್ಷ ನೂರುಲ್ಲಾಖಾನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಅಬ್ಸರ್ ಅಹ್ಮದ್, ವಕೀಲ ಪ್ರಶಾಂತ್, ತನುಜ್‍ ಕುಮಾರ್, ರಾಜಶೇಖರ್, ಕಿರಣ್, ಸಿರಾಜ್ ಅಹ್ಮದ್, ಕಾರ್ತಿಕ್, ಜಿ.ಚಿಟ್ಟಿಹಾರ್ ಗೆ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ರೈತ ಸಂಘದ ಮುಖಂಡ ಗುರುಶಾಂತಪ್ಪ, ನಗರಸಭೆ ಸದಸ್ಯ ಟಿ.ರಾಜಶೇಖರ್, ನಗರಸಭೆ ಸದಸ್ಯ ರೂಬೀನ್ ಮೊಸೆಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News