ನೋಟು ನಿಷೇಧದಿಂದ ರೈತರಿಗೆ ಭಾರೀ ನಷ್ಟ: ಒಪ್ಪಿಕೊಂಡ ಕೃಷಿ ಸಚಿವಾಲಯ

Update: 2018-11-21 17:54 GMT

ಹೊಸದಿಲ್ಲಿ, ನ.21: ಗರಿಷ್ಠ ಮುಖಬೆಲೆಯ ನೋಟು ನಿಷೇಧದಿಂದಾಗಿ ಲಕ್ಷಾಂತರ ರೈತರಿಗೆ ಚಳಿಗಾಲದ ಬೆಳೆಗೆ ಬಿತ್ತನೆಯ ಬೀಜ ಹಾಗೂ ಗೊಬ್ಬರಗಳನ್ನು ಖರೀದಿಸಲು ಸಾಧ್ಯವಾಗಲಿಲ್ಲ ಎಂದು ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ಕೇಂದ್ರ ಕೃಷಿ ಸಚಿವಾಲಯ ನೀಡಿರುವ ವರದಿಯಲ್ಲಿ ತಿಳಿಸಿದೆ.

ನೋಟು ನಿಷೇಧದ ಕ್ರಮದ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಗೆ ಹಣ ವಾಪಸಾಗಲು ಹಾಗೂ ದೇಶದಲ್ಲಿ ಬೇರುಮಟ್ಟದಲ್ಲಿರುವ ಭ್ರಷ್ಟಾಚಾರಕ್ಕೆ ‘ಸೂಕ್ತ ಮದ್ದು’ ನೀಡಿದ್ದೇನೆ ಎಂದು ಮಧ್ಯಪ್ರದೇಶ ಚುನಾವಣೆ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದ ದಿನವೇ ನೋಟು ನಿಷೇಧದಿಂದಾಗಿ ಉಂಟಾದ ವ್ಯತಿರಿಕ್ತ ಪರಿಣಾಮದ ವರದಿ ಸಲ್ಲಿಕೆಯಾಗಿದೆ.

ಕಾಂಗ್ರೆಸ್ ಸಂಸದ ವೀರಪ್ಪ ಮೊಲಿ ಅಧ್ಯಕ್ಷತೆಯ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಗೆ ನೋಟು ನಿಷೇಧದಿಂದಾಗಿರುವ ಪರಿಣಾಮದ ಬಗ್ಗೆ ಕೃಷಿ ಸಚಿವಾಲಯ, ಕಾರ್ಮಿಕ ಹಾಗೂ ಉದ್ಯೋಗ, ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಮಂಗಳವಾರ ವಿವರ ನೀಡಿವೆ.

 ಸಾಕಷ್ಟು ನಗದು ಇರಲಿಲ್ಲ: ಕೃಷಿ ಸಚಿವಾಲಯ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಿರುವ ‘ ದಿ ಹಿಂದೂ’ ಪತ್ರಿಕೆ ಪ್ರಕಾರ, ರೈತರು ಖಾರಿಫ್ ಬೆಳೆಯ ಫಸಲನ್ನು ಮಾರಾಟ ಮಾಡುವಾಗ ಅಥವಾ ರಾಬಿಬೆಳೆ ಬಿತ್ತನೆಯ ವೇಳೆ ನೋಟು ನಿಷೇಧ ಮಾಡಲಾಗಿದೆ. ಈ ಎರಡು ಚಟುವಟಿಕೆಯ ವೇಳೆ ದೊಡ್ಡ ಪ್ರಮಾಣದ ನಗದು ಹಣ್ತ ಅಗತ್ಯವಿರುತ್ತದೆ. ಭಾರತ 263 ಲಕ್ಷ ರೈತರು ನಗದು ವ್ಯವಹಾರವನ್ನೇ ನೆಚ್ಚಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಲಕ್ಷಾಂತರ ರೈತರು ಚಳಿಗಾಲದ ಬೆಳೆಗೆ ಬಿತ್ತನೆ ಬೀಜ ಹಾಗೂ ಗೊಬ್ಬರಗಳನ್ನು ಖರೀದಿಸಲು ಸಾಕಷ್ಟು ನಗದು ಹಣ ಹೊಂದಿರಲಿಲ್ಲ. ದೊಡ್ಡ ಜಮೀನ್ದಾರರು ತಮ್ಮ ಕೆಲಸದಾಳುಗಳಿಗೆ ದಿನಗೂಲಿ ನೀಡಲು ಹಾಗೂ ಬೆಳೆಯುತ್ತಿರುವ ಬೆಳೆಗೆ ಅಗತ್ಯವಿರುವ ಕೃಷಿ ವಸ್ತುಗಳನ್ನು ಖರೀದಿಸಲು ಸಮಸ್ಯೆ ಎದುರಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪ್ರಗತಿ ಕಾಣದ ಬೀಜ ಮಾರಾಟ ಪ್ರಕ್ರಿಯೆ

ರಾಷ್ಟ್ರೀಯ ಬೀಜ ನಿಗಮ ನಗದು ಬಿಕ್ಕಟ್ಟಿನಿಂದಾಗಿ ಸುಮಾರು 1.38 ಲಕ್ಷ ಕ್ವಿಂಟಾಲ್ ಗೋಧಿ ಬೀಜಗಳನ್ನು ಮಾರಾಟ ಮಾಡಲು ವಿಫಲವಾಗಿತ್ತು. ಗೋಧಿ ಬೀಜಗಳ ಮಾರಾಟಕ್ಕೆ ಹಳೆಯ 500 ಹಾಗೂ 1000 ನೋಟುಗಳನ್ನು ಬಳಸಲು ಸರಕಾರ ಅನುಮತಿ ನೀಡಿದರೂ ಬೀಜ ಮಾರಾಟದಲ್ಲಿ ಏರಿಕೆಯಾಗಿರಲಿಲ್ಲ.

ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ದೇಶದ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ರೈತರ ಯಾತನೆ ಅತ್ಯಂತ ಪ್ರಮುಖ ವಿಷಯವಾಗಿದೆ.

ನೋಟು ನಿಷೇಧ ದೊಡ್ಡ ರೈತರ ಮೇಲೂ ಪರಿಣಾಮ ಬೀರಿದೆ. ಅವರ ಹೊಲದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡುವಲ್ಲಿ ಸಮಸ್ಯೆ ಉಂಟಾಗಿದೆ. ನೋಟು ನಿಷೇಧದಿಂದ ಅವರು ಹಣದ ಮುಗ್ಗಟ್ಟಿಗೆ ಒಳಗಾದರು ಎಂದು ವರದಿ ಹೇಳಿದೆ.

ಹಣದ ಕೊರತೆಯಿಂದ ರಾಷ್ಟ್ರೀಯ ಬೀಜ ಮಂಡಳಿಯ ಸುಮಾರು 1.38 ಲಕ್ಷ ಕ್ವಿಂಟಾಲ್ ಗೋದಿ ಬೀಜ ಮಾರಾಟವಾಗಲೇ ಇಲ್ಲ. ಅನಂತರ ಗೋಧಿ ಬೀಜಗಳನ್ನು ಖರೀದಿಸಲು ಹಳೆಯ ರೂ. 1000 ಹಾಗೂ ರೂ. 500ರ ನೋಟುಗಳನ್ನು ಬಳಸಲು ಕೇಂದ್ರ ಸರಕಾರ ಅವಕಾಶ ನೀಡಿತು. ಆದರೆ, ಈ ವಿನಾಯಿತಿಯಿಂದ ಪರಿಸ್ಥಿತಿ ಹೆಚ್ಚು ಸುಧಾರಣೆಯಾಗಲಿಲ್ಲ ಎಂದು ಅದು ಹೇಳಿದೆ.

ಆದಾಗ್ಯೂ, ಕಾರ್ಮಿಕ ಸಚಿವಾಲಯ ಸಮಿತಿಗೆ ಸಲ್ಲಿಸಿದ ವರದಿಯಲ್ಲಿ, ನೋಟು ನಿಷೇಧದ ತ್ರೈಮಾಸಿಕದಲ್ಲಿ ಉದ್ಯೋಗ ಅಂಕಿ-ಅಂಶದಲ್ಲಿ ಹೆಚ್ಚಳವಾಯಿತು ಎಂದು ಹೊಗಳಿದೆ.

ಸ್ಥಾಯಿ ಸಮಿತಿ ಸಭೆಯಲ್ಲಿ ಪ್ರತಿಪಕ್ಷಗಳ ಸಂಸದರು ನಗದು ನಿಷೇಧವನ್ನು ಟೀಕಿಸಿದರು ಹಾಗೂ ಅತಿ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳಲ್ಲಿ ಉದ್ಯೋಗ ನಷ್ಟವಾಗಿರುವ ಬಗ್ಗೆ ದತ್ತಾಂಶಗಳನ್ನು ನೀಡುವಂತೆ ಸರಕಾರವನ್ನು ಆಗ್ರಹಿಸಿದರು.

ಈ ಸಮಿತಿಯಲ್ಲಿ ಕಾಂಗ್ರೆಸ್‌ನ ವೀರಪ್ಪ ಮೊಯ್ಲಿ ಹಾಗೂ ಮನಮೋಹನ್ ಸಿಂಗ್ ಸೇರಿದಂತೆ 31 ಸದಸ್ಯರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News