ಚಿಕ್ಕಮಗಳೂರು: ಸಂಭ್ರಮ, ಸಡಗರದ ಮೀಲಾದುನ್ನಬಿ ಆಚರಣೆ

Update: 2018-11-21 13:43 GMT

ಚಿಕ್ಕಮಗಳೂರು, ನ.21: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಹುಟ್ಟಿದ ಹಬ್ಬವನ್ನು ನಗರದಲ್ಲಿ ಮುಸ್ಲಿಮರು ಬುಧವಾರ ಸಂಭ್ರಮ ಸಡಗರದಿಂದ ಆಚರಿಸಿದರು. ಹಬ್ಬದ ಅಂಗವಾಗಿ ನಗರದ ಎಂಜಿ ರಸ್ತೆಯಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಅದ್ಧೂರಿ ಮೆರವಣಿಗೆ ನಡೆಸಿದ್ದು, ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಮಿಲಾದುನ್ನಬಿ ಅಂಗವಾಗಿ ನಗರದ ಎಲ್ಲ ಬಡಾವಣೆಗಳಲ್ಲಿ ಹಸಿರು ಬಾವುಟಗಳು ರಾರಾಜಿಸುಸುತ್ತಿದ್ದವು. ಬುಧವಾರ ಮುಂಜಾನೆ ಹೊಸ ಧಿರಿಸುಗಳೊಂದಿಗೆ ನಗರದ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದರು. ನಂತರ ಮುಸ್ಲಿಂ ಧರ್ಮಗುರುಗಳ ಸಮ್ಮುಖದಲ್ಲಿ ಸಾವಿರಾರು ಮಂದಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ಬಳಿಕ ಪುಟಾಣಿಗಳಾದಿಯಾಗಿ ಪುರುಷರು, ವೃದ್ಧರು ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆಯಲ್ಲಿ ಕೆಲ ಜನಪ್ರತಿನಿಧಿಗಳು ಭಾಗವಹಿಸಿ, ಸಮುದಾಯದವರಿಗೆ ಹಬ್ಬದ ಶುಭಾಶಯ ಕೋರಿದರು.

ಮೀಲಾದುನ್ನಬಿ ಅಂಗವಾಗಿ ಈದ್ಗಾ ಮೈದಾದನಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆ ಬಳಿಕ ನಗರದ ಬಸವನಹಳ್ಳಿ ಮಾರ್ಗವಾಗಿ ಸಾವಿರಾರು ಸಂಖ್ಯೆಯಲ್ಲಿದ್ದ ಸಮುದಾಯದ ಸದಸ್ಯರು ಹನುಮಂತಪ್ಪ ವೃತ್ತದ ಮೂಲಕ ಎಂಜಿ ರಸ್ತೆಯಲ್ಲಿ ಆಕರ್ಷಕವಾದ ಭವ್ಯ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್ ಹುಲಿಯೊಂದಿಗೆ ಸೆಣಸುವ ಪುಟಾಣಿಗಳ ಸ್ತಬ್ಧ ಚಿತ್ರ ಸಾರ್ವಜನಿಕರ ಮನಸೆಳೆಯಿತು. ವಿವಿಧ ಕಲಾ ತಂಡಗಳು ಹಾಗೂ ಹಸಿರು ಬಾವುಟಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು. ಆಟೊ ರಿಕ್ಷಾಗಳ ಸಾಲು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ವೇಳೆ ಹಿಂದೂ ಬಾಂಧವರು ತಮ್ಮ ಮುಸ್ಲಿಂ ಸ್ನೇಹಿತರಿಗೆ ಹಬ್ಬದ ಶುಭಾಶಯ ಕೋರುತ್ತಿದ್ದ ದೃಶ್ಯಗಳು ಕಂಡು ಬಂದವು.

ಮೀಲಾದುನ್ನಬಿ ಅಂಗವಾಗಿ ಏರ್ಪಡಿಸಲಾಗಿದ್ದ ಮೆರವಣಿಗೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಿತ್ತು. ಎಂಜಿ ರಸ್ತೆಗಳಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News