ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ನ.22ರಂದು ಸಿಎಂ ಸಭೆ

Update: 2018-11-21 14:32 GMT

ಬೆಂಗಳೂರು, ನ.21: ಕಬ್ಬು ಬೆಳೆಗಾರರಿಗೆ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆ ಮಾಲಕರ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನ.22ರಂದು ಮಧ್ಯಾಹ್ನ 12.30ಕ್ಕೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಲಿದ್ದಾರೆ.

ಮಂಗಳವಾರ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳು, ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ಸುದೀರ್ಘವಾಗಿ ವಿಧಾನಸೌಧದಲ್ಲಿ ಸಭೆ ನಡೆಸಿ ಹಲವಾರು ವಿಷಯಗಳ ಕುರಿತು ಮುಖ್ಯಮಂತ್ರಿ ಚರ್ಚೆ ನಡೆಸಿದ್ದರು.

ಕಬ್ಬು ಬೆಳೆಗಾರರೊಂದಿಗೆ ಸಕ್ಕರೆ ಕಾರ್ಖಾನೆ ಮಾಲಕರು ಮೌಖಿಕವಾಗಿ ಮಾಡಿಕೊಂಡಿರುವ ಒಪ್ಪಂದದಂತೆ ಹಣ ಪಾವತಿ ಮಾಡಲೇಬೇಕು. ಇದಕ್ಕಾಗಿ, ಕಾನೂನಿನ ಚೌಕಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದರು. ಆದರೆ, ಮೌಖಿಕ ಒಪ್ಪಂದದಂತೆ ಹಣ ಪಾವತಿ ಮಾಡಬೇಕೆಂಬ ಸರಕಾರದ ಸೂಚನೆಯನ್ನು ಒಪ್ಪಿಕೊಳ್ಳಲು ನಮ್ಮಿಂದ ಸಾಧ್ಯವಿಲ್ಲ ಎಂದು ಸಕ್ಕರೆ ಕಾರ್ಖಾನೆ ಮಾಲಕರ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆ ಮಾಲಕರೊಂದಿಗೆ ಪ್ರತ್ಯೇಕ ಸಭೆ ನಡೆಸಲು ಮುಖ್ಯಮಂತ್ರಿ ನಿರ್ಧರಿಸಿದ್ದರು.

ಕಬ್ಬು ಬೆಳೆಗಾರರಿಗೆ ಯಾವ ಯಾವ ಕಾರ್ಖಾನೆಗಳಿಂದ ಎಷ್ಟು ಮೊತ್ತವನ್ನು ಪಾವತಿಸಬೇಕಿದೆ ಎಂಬ ಮಾಹಿತಿಯನ್ನು ಸಂಗ್ರಹಿಸಿರುವ ಅಧಿಕಾರಿಗಳು, ನಾಳೆ ನಡೆಯಲಿರುವ ಸಭೆಯಲ್ಲಿ ಈ ಮಾಹಿತಿಯನ್ನು ಮುಂದಿಟ್ಟುಕೊಂಡು, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ ಚರ್ಚೆ ನಡೆಸಲಿದ್ದಾರೆ ಎಂದು ಅವರು ಹೇಳಿದರು.

ಧರಣಿ ಮುಂದುವರಿಕೆ: ರಾಜ್ಯ ಸರಕಾರವು ಸಕ್ಕರೆ ಕಾರ್ಖಾನೆ ಮಾಲಕರೊಂದಿಗೆ ಸಭೆ ನಡೆಸಿ ನ್ಯಾಯ ಒದಗಿಸುವವರೆಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಂದುವರೆಸಲು ಕಬ್ಬು ಬೆಳೆಗಾರರು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News