ಬೈಕ್‌-ಕಾರುಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಕಾಲೇಜ್ ಕ್ಯಾಂಪಸ್‌ಗೆ ಪ್ರವೇಶ ನಿರ್ಬಂಧ ?

Update: 2018-11-21 14:43 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ. 21: ಪರಿಸರ ಮಾಲಿನ್ಯ ತಡೆ, ಅಪಘಾತ ತಪ್ಪಿಸಲು ಹಾಗೂ ಮೆಟ್ರೋ, ಬಿಎಂಟಿಸಿ ಸೇರಿದಂತೆ ಸಮೂಹ ಸಾರಿಗೆ ಬಳಕೆಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಬೈಕ್-ಕಾರುಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ಗೆ ಪ್ರವೇಶ ನಿರ್ಬಂಧಕ್ಕೆ ಉನ್ನತ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ.

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಹಾಗೂ ಕಾರುಗಳನ್ನು ಬಳಕೆ ಮಾಡುತ್ತಿದ್ದು, ಅಪಘಾತಗಳು ಹೆಚ್ಚುತ್ತಿವೆ. ಜತೆಗೆ ಕಾಲೇಜು ಕ್ಯಾಂಪಸ್‌ಗಳಲ್ಲಿ ವಿದ್ಯಾರ್ಥಿಗಳ ‘ಮೋಜು-ಮಸ್ತಿ’ ಹೆಚ್ಚಾಗುತ್ತಿದೆ. ಆದುದರಿಂದ ಬೈಕ್-ಕಾರುಗಳಲ್ಲಿ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್‌ಗೆ ನಿರ್ಬಂಧ ಹೇರಲು ಉದ್ದೇಶಿಸಲಾಗಿದೆ.

ಅಲ್ಲದೆ, ವಿದ್ಯಾರ್ಥಿ ಸಮೂಹದಲ್ಲಿ ‘ಸಮಾನತೆ’ ತರುವ ದೃಷ್ಟಿಯಿಂದ ಮೇಲ್ಕಂಡ ನಿರ್ಧಾರಕ್ಕೆ ಉನ್ನತ ಶಿಕ್ಷಣ ಇಲಾಖೆಗೆ ಬಂದಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಬೈಕ್, ಕಾರುಗಳಲ್ಲಿ ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕಾಲೇಜು ಕ್ಯಾಂಪಸ್ ಪ್ರವೇಶ ನಿರ್ಬಂಧಿಸಲು ಮುಂದಾಗಿದೆ ಎಂದು ಗೊತ್ತಾಗಿದೆ.

ಈ ಸಂಬಂಧ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳು, ಸಿಂಡಿಕೇಟ್ ಸದಸ್ಯರುಗಳು ಹಾಗೂ ಖಾಸಗಿ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News