ಮಂಡ್ಯ: ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ; ಓರ್ವ ಕಾರ್ಮಿಕ ಅಸ್ವಸ್ಥ

Update: 2018-11-21 16:43 GMT

ಮಂಡ್ಯ, ನ.21: ಮದ್ದೂರು ತಾಲೂಕಿನ ಕೊಪ್ಪ ಸಮೀಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟಗೊಂಡು ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು, ಕಾರ್ಖಾನೆ ಹೊರವಲಯದ ರೈತರ ಜಮೀನಿಗೆ ಡಿಸ್ಟಲರಿ ವಾಟರ್ ಹರಿದು ಲಕ್ಷಾಂತರ ರೂ. ಬೆಳೆ ನಷ್ಟವಾಗಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಇದರೊಟ್ಟಿಗೆ ಕಾರ್ಖಾನೆಯಿಂದ ಹೊರಬಂದ ಕಲುಷಿತ ಡಿಸ್ಟಲರಿ ವಾಟರ್ ಮತ್ತಿತರ ತ್ಯಾಜ್ಯಗಳು ಚಿಕ್ಕೋನಹಳ್ಳಿ ವ್ಯಾಪ್ತಿಯ ನಾಲೆಗೆ ಸೇರಿದ್ದು ಜಲಚರಗಳೂ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಆತಂಕ ಎದುರಾಗಿದೆ. 

ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಒಳ ಆವರಣದಲ್ಲಿ ಭಾರಿ ಪ್ರಮಾಣದ ನಷ್ಟ ಉಂಟಾಗಿರುವ ಕುರಿತು ತಿಳಿದು ಬಂದಿದ್ದು, ದುರ್ಘಟನೆ ವೇಳೆ ಸಾಕಷ್ಟು ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದರಾದರೂ ಸಮೀಪದಲ್ಲಿದ್ದ ಆನಂದ್ ತೀವ್ರ ಗಾಯಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರೈತರ ಪ್ರತಿಭಟನೆ: ಬಾಯ್ಲರ್ ಸ್ಫೋಟದ ವೇಳೆ ಕಾರ್ಖಾನೆಯಿಂದ ಹೊರಹರಿದ 60 ಲಕ್ಷ ಲೀಟರ್ ನಷ್ಟು ಡಿಸ್ಟಲರಿ ವಾಟರ್ ರೈತರ ಜಮೀನು ಹಾಗೂ ಕಾಲುವೆಗಳಿಗೆ ಹರಿದು ಅಪಾರ ಪ್ರಮಾಣದ ನಷ್ಟ ಉಂಟಾಗಿರುವ ಹಿನ್ನಲೆಯಲ್ಲಿ ಸ್ಥಳೀಯ ರೈತರು ಕಾರ್ಖಾನೆಯ ಎದುರು ಪ್ರತಿಭಟನೆ ನಡೆಸಿದರು.

ಹಿಂದಿನಿಂದಲೂ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನೌಕರರು ಹಾಗೂ ಸ್ಥಳೀಯ ರೈತರ ಸುರಕ್ಷತೆ ಮತ್ತು ಪರಿಸರ ಸಂರಕ್ಷಣೆ ನಿರ್ಲಕ್ಷಿಸಿದ್ದು, ಈ ಕುರಿತು ಮೌನವಹಿಸಿರುವ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರಲ್ಲದೇ ಕೂಡಲೇ ನಷ್ಟ ಭರಿಸುವಂತೆ ಆಗ್ರಹಿಸಿದರು.

ಶಾಸಕರ ಭೇಟಿ: ಸ್ಥಳಕ್ಕೆ ಶಾಸಕರಾದ ಕೆ.ಸುರೇಶ್‍ಗೌಡ ಹಾಗೂ ಕೆ.ಟಿ. ಶ್ರೀಕಂಠೇಗೌಡ ಭೇಟಿ ನೀಡಿ ಅಧಿಕಾರಿಗಳೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿದರಲ್ಲದೇ ಗಾಯಾಳು ಕಾರ್ಮಿಕ ಹಾಗೂ ಬೆಳೆ ನಷ್ಟ ಸಂಬಂಧ ರೈತರಿಗೆ ಸೂಕ್ತ ಪರಿಹಾರ ವಿತರಿಸುವಂತೆ ಕಾರ್ಖಾನೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಸೂಚಿಸಿದರು.

ಜಯಕರ್ನಾಟಕ ಸಂಘಟನೆ, ರೈತಸಂಘ, ಕಬ್ಬು ಬೆಳೆಗಾರರ ಸಂಘ ಸೇರಿದಂತೆ ಇನ್ನಿತರೆ ಸಂಘಟನೆಗಳ ಮುಖಂಡರು, ಸ್ಥಳೀಯ ರೈತರು ಪ್ರತಿಭಟನೆ ವೇಳೆ ಪಾಲ್ಗೊಂಡಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು, ಉಪ ವಿಭಾಗಧಿಕಾರಿ ರಾಜೇಶ್, ಪ್ರಭಾರ ತಹಸೀಲ್ದಾರ್ ಶ್ವೇತ, ಪರಿಸರ ಮಾಲಿನ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News