ಶಿವಮೊಗ್ಗ: ವಿಜ್ಞಾನ ವಸ್ತು ಪ್ರದರ್ಶನದ ವೇಳೆ ವಿದ್ಯಾರ್ಥಿನಿಯ ಕಾಲಿಗೆ ಆ್ಯಸಿಡ್ ಬಿದ್ದು ಗಾಯ

Update: 2018-11-21 17:19 GMT

ಶಿವಮೊಗ್ಗ, ನ. 20: ಖಾಸಗಿ ಶಾಲೆಯೊಂದರಲ್ಲಿ ಆಯೋಜಿತವಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ವೇಳೆ ಆಕಸ್ಮಿಕವಾಗಿ ವಿದ್ಯಾರ್ಥಿನಿಯೋರ್ವಳ ಕಾಲಿನ ಮೇಲೆ ಆ್ಯಸಿಡ್ ಬಿದ್ದು, ಗಂಭೀರ ಸ್ವರೂಪದ ಗಾಯವಾಗಿರುವ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. 

ನಗರದ ಹೊರವಲಯ ಗಾಡಿಕೊಪ್ಪದ ಸೆಂಟ್ ಜೋಸೆಫ್ ಅಕ್ಷರಧಾಮ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅದೇ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಗಾಯಗೊಂಡವಳೆಂದು ಗುರುತಿಸಲಾಗಿದೆ. ಈ ಕುರಿತಂತೆ ಬಾಲಕಿಯ ಪೋಷಕರು ತುಂಗಾ ನಗರ ಪೊಲೀಸ್ ಠಾಣೆ ಹಾಗೂ ಸ್ಥಳೀಯ ಕಾನೂನು ಸೇವಾ ಪ್ರಾಧಿಕಾರದ ಘಟಕಕ್ಕೆ ದೂರು ನೀಡಿದ್ದರು. 

ಈ ದೂರನ್ನು ಗಂಭೀರವಾಗಿ ಪರಗಣಿಸಿದ ಕಾನೂನು ಸೇವಾ ಪ್ರಾಧಿಕಾರವು ಶಾಲಾ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಶಿಕ್ಷಕರಿಂದ ಮಾಹಿತಿ ಕಲೆ ಹಾಕಿದೆ. ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ಅಂತಿಮವಾಗಿ ಶಾಲೆಯವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ, ಪೋಷಕರ ಬಳಿ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರವಹಿಸುವುದಾಗಿ ತಿಳಿಸಿದ್ದಾರೆ. 

ಅಂತಿಮವಾಗಿ ಪ್ರಾಧಿಕಾರವು ಶಾಲೆಯವರಿಗೆ ಎಚ್ಚರಿಕೆ ನೀಡಿ, ಈ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಪೂರ್ವಭಾವಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸುವ ಮೂಲಕ ಪ್ರಕರಣ ಇತ್ಯರ್ಥಗೊಳಿಸಿದೆ. ಇದಕ್ಕೆ ದೂರುದಾರ ಬಾಲಕಿಯ ಪೋಷಕರು ಕೂಡ ಸಮ್ಮತಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ದೂರನ್ನು ಕೂಡ ಹಿಂಪಡೆಯುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. 

ಘಟನೆ ಹಿನ್ನೆಲೆ: ನ.19 ರಂದು ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು. ಇದರಲ್ಲಿ ಅಪಾಯಕಾರಿ ಆ್ಯಸಿಡ್‍ಗೆ ಸಂಬಂಧಿತ ಪ್ರದರ್ಶನವೂ ಇತ್ತು. ಈ ವೇಳೆ ಬಾಲಕಿಯ ಕಾಲಿನ ಮೇಲೆ ಆಕಸ್ಮಿಕವಾಗಿ ಆ್ಯಸಿಡ್ ಬಿದ್ದು, ಗಾಯವಾಗಿದೆ. 

ಅಪ್ರಾಪ್ತ ಮಕ್ಕಳ ಕೈಯಲ್ಲಿ ಅಪಾಯಕಾರಿ ವಸ್ತುಗಳ ಮೂಲಕ ಶೈಕ್ಷಣಿಕ ಚಟುವಟಿಕೆ ನಡೆಸುವುದು ಕಾನೂನುಬಾಹಿರವಾಗಿದ್ದರೂ, ಶಾಲೆಯವರು ಆ್ಯಸಿಡ್ ಸಂಬಂಧಿತ ವಿಜ್ಞಾನ ಪ್ರದರ್ಶನ ಆಯೋಜಿಸಿದ್ದಕ್ಕೆ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದರು. 

ಆದರೆ ಶಾಲೆಯ ಸಂಬಂಧಿಸಿದವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಪೋಷಕರು, ಕಾನೂನು ಸೇವಾ ಪ್ರಾಧಿಕಾರಕ್ಕೆ ಶಾಲೆಯ ವಿರುದ್ದ ದೂರು ನೀಡಿದ್ದರು. ಈ ಕಾರಣದಿಂದ ಅವರು ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News