ಶಿವಮೊಗ್ಗ: ಮರಗಳ್ಳರಿಂದ ಅರಣ್ಯ ಸಿಬ್ಬಂದಿಗಳ ಮೇಲೆ ಹಲ್ಲೆ

Update: 2018-11-21 17:22 GMT

ಶಿವಮೊಗ್ಗ, ನ. 21: ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಮರಗಳ್ಳರ ತಂಡ ಹಲ್ಲೆ ನಡೆಸಿ, ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಉಡುಗಣಿ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದೆ. 

ಘಟನೆಯಲ್ಲಿ ಧರ್ಮನಾಯ್ಕ್, ದುರ್ಗಪ್ಪ ಹಾಗೂ ಯುವರಾಜ ಎಂಬ ಅರಣ್ಯ ಸಿಬ್ಬಂದಿಗೆ ಗಾಯವಾಗಿದೆ. ಇವರು ಶಿರಾಳಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಘಟನೆ ಹಿನ್ನೆಲೆ: ಉಡುಗಣಿ ಗ್ರಾಮದ ಸರ್ವೇ ನಂಬರ್ 36 ರ ಕಿರು ಅರಣ್ಯ ಪ್ರದೇಶ ವ್ಯಾಪ್ತಿಯ ಕೆಎಫ್‍ಡಿಸಿ ನೆಡು ತೋಪಿನಲ್ಲಿ ಅಕ್ರಮವಾಗಿ ಮರಗಳ ಕಡಿತಲೆ ಮಾಡುತ್ತಿತ್ತು. ಈ ಕುರಿತಂತೆ ಮಾಹಿತಿ ಅರಿತ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಸುಮಾರು 20 ಹೆಚ್ಚು ಜನರಿದ್ದ ಮರಗಳ್ಳರು ಇವರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳ ವಸತಿ ಗೃಹದ ಕಿಟಕಿ ಗಾಜುಗಳನ್ನು ಗುಂಪು ಪುಡಿಗೈದಿದೆ ಎನ್ನಲಾಗಿದೆ.

ಈ ಕುರಿತಂತೆ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮಾರು 20 ಕ್ಕೂ ಅದಿಕ ಜನರ ವಿರುದ್ದ ಹಲ್ಲೆಗೀಡಾದ ಅರಣ್ಯ ಇಲಾಖೆ ಸಿಬ್ಬಂದಿಗಳು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News