ದಾವಣಗೆರೆ: ಸಂಭ್ರಮ ಸಡಗರದ ಈದ್ ಮಿಲಾದ್ ಆಚರಣೆ

Update: 2018-11-21 17:59 GMT

ದಾವಣಗೆರೆ,ನ.21: ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಸಡಗರ ಸಂಭ್ರಮದಿಂದ ಆಚರಿಸಿದರು.

ಹಬ್ಬದಂಗವಾಗಿ ನಗರದಲ್ಲಿ ಈದ್ ಮಿಲಾದ್ ಸಮಿತಿ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಐವತ್ತು ಸಾವಿರಕ್ಕೂ ಅಧಿಕ ಮುಸ್ಲಿಂ ಸಮಾಜದ ಬಾಂಧವರು ಪಾಲ್ಗೊಂಡಿದ್ದರು. ಮಧ್ಯಾಹ್ನ 2.30ಕ್ಕೆ ಅಜಾದ್ ನಗರದ ವೃತ್ತದಲ್ಲಿ ಮಿಲಾದ್ ಕಮಿಟಿ ಕಚೇರಿ ಎದುರು ಫಾತೇಹಖಾನಿ ಪಠಿಸಲಾಯಿತು. 

ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್ ಚಾಲನೆ ನೀಡಿ ಶುಭ ಹಾರೈಸಿದರು. ನಂತರ, ಚಾಮರಾಜಪೇಟೆ ವೃತ್ತಕ್ಕೆ ಆಗಮಿಸಿ ಶಾಸಕ ಶಾಮನೂರು ಶಿವಶಂಕರಪ್ಪ ಸಹ ಶುಭ ಹಾರೈಸಿದರು. ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕಮಿಟಿ ಅಧ್ಯಕ್ಷ ಕೆ. ಅತಾವುಲ್ಲಾ ರಝ್ವಿ, ತಂಜೀಮನ ಸಾಧಿಕ ಪೈಲ್ವಾನ್, ಸೈಯದ್ ಸೈಫುಲ್ಲಾ, ಎ.ಬಿ. ಜೀಬಿವುಲ್ಲಾ, ಯಾಸೀರ್ ಪೀರ್ ರಝ್ವಿ, ಬಿ.ಅಸ್ಲಾಂ ಖಾನ್, ಎಸ್.ಎಂ. ಗೌಸ್, ಸೈಯದ್ ಶಫೀವುಲ್ಲಾ, ಸಿರಾಜ್ ಆಹಮದ್, ಎ.ಬಿ.ರಹೀಂ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸೈಯದ್ ಚಾರ್ಲಿ, ಅಮಾನುಲ್ಲಾ ಖಾನ್, ಮಹಮದ್ ಅಸ್ಲಂ, ಅಬ್ದುಲ್ ಬಾರಿ, ಕೋಳಿ ಇಬ್ರಾಹಿಂ, ಅಬ್ದುಲ್ ಲತೀಫ್,  ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್, ದೇವರಮನಿ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಅಜಾದ್ ನಗರದ ಮದೀನ ಸರ್ಕಲ್‍ನಿಂದ ಪ್ರಾರಂಭಗೊಂಡ ಮೆರವಣಿಗೆಯು ಹಾಸಬಾವಿ ಸರ್ಕಲ್, ಚಾಮರಾಜ ಸರ್ಕಲ್, ಮಂಡಿಪೇಟೆ ರಸ್ತೆ ಮುಖಾಂತರ ಲಕ್ಷ್ಮೀ ಸರ್ಕಲ್, ತಾಲೂಕು ಕಚೇರಿ ಮುಂಭಾಗದ ರಸ್ತೆಯಿಂದ, ವಸಂತ ರಸ್ತೆ, ಹೊಂಡದ ರಸ್ತೆ, ರಾಣಿಚನ್ನಮ್ಮ ವೃತ್ತ, ಹಳೇ ಪಿ.ಬಿ ರಸ್ತೆ ಮುಖಾಂತರ, ಎಂ.ಜಿ. ಸರ್ಕಲ್, ಅಶೋಕ ರಸ್ತೆ, ಕೆ.ಆರ್ ರಸ್ತೆ ಮುಖಾಂತರ, ಜಗಳೂರು ಬಸ್ ನಿಲ್ದಾಣ, ಅರಳಿಮರ ಸರ್ಕಲ್, ಅಜಾದ್ ನಗರ ಪೊಲೀಸ್ ಠಾಣೆ ಮುಂಭಾಗ, ಬಿ.ಡಿ. ಲೇಔಟ್ ಮುಖ್ಯ ರಸ್ತೆ ಮುಖಾಂತರ ಸಾಗಿ ಸಂಜೆ ಜೋಹರ್ ನಗರದಲ್ಲಿರುವ ಈದ್ ಮಿಲಾದ್ ಮೈದಾನದಲ್ಲಿ ಆಚರಣೆಯೊಂದಿಗೆ ಮುಕ್ತಾಯಗೊಂಡಿತು.

ಮೆರವಣಿಗೆ ಸಾಗಿ ಬಂದ ದಾರಿಯುದ್ದಕ್ಕೂ ರಸ್ತೆಗಳ ಎರಡೂ ಬದಿಗಳಲ್ಲಿ ಸಮಾಜದ ಅನೇಕ ಸಂಘಟನೆಗಳ ಕಾರ್ಯಕರ್ತರು ಪಾನಕ, ಮಜ್ಜಿಗೆ, ಎಳೆನೀರು ಸೇರಿದಂತೆ ಅನೇಕ ಬಗೆಯ ಪಾನೀಯಗಳನ್ನು ನೀಡಿ ಸಮಾಜ ಬಾಂಧವರ ಮತ್ತು ಸಾರ್ವಜನಿಕರ ದಾಹ ನೀಗಿಸಿದರು.

ಮೆರಣಿಗೆಯ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ತೆ ಮಾಡಿತ್ತು. 2 ಡ್ರೋಣ್ ಕ್ಯಾಮೇರಾ ಹಾಗೂ ಬಂದೋಬಸ್ತ್ ಗಾಗಿ ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ, ಇಪ್ಪತ್ತಕ್ಕೂ ಅಧಿಕ ಸಿಸಿ ಕ್ಯಾಮೆರಾ ಅಳವಡಿಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News