ಕಬ್ಬು ಬೆಳೆಗಾರರನ್ನು ಬಿಜೆಪಿ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ: ಪರಿಷತ್ ಸದಸ್ಯ ಭೋಜೇಗೌಡ

Update: 2018-11-22 12:42 GMT

ಚಿಕ್ಕಮಗಳೂರು, ನ.22: ಕಬ್ಬು ಬೆಳೆಗಾರರ ಹೋರಾಟವನ್ನು ಬಿಜೆಪಿ ಪಕ್ಷ ರಾಜಕೀಯ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿ ಮುಖಂಡರು ಬೆಳೆಗಾರ ಹೋರಾಟವನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭಕ್ಕೆ ಹವಣಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆರೋಪಿಸಿದ್ದಾರೆ. 

ಗುರುವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ಕಬ್ಬು ಬೆಳೆಗಾರರ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರಕಾರ ಬದ್ಧವಾಗಿದೆ. ಈ ಸಂಬಂಧ ಸಿಎಂ ಕುಮಾರಸ್ವಾಮಿ ಅಗತ್ಯ ಕ್ರಮ ವಹಿಸುತ್ತಿದ್ದಾರೆ. ಆದರೆ ಬಿಜೆಪಿ ಮುಖಂಡರು ಕಬ್ಬು ಬೆಳೆಗಾರರ ಹೋರಾಟವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡು ಹೋರಾಟಗಾರರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಬಿಜೆಪಿ ಮುಖಂಡರಿಗೆ ನೈತಿಕತೆ, ರೈತರ ಬಗ್ಗೆ ಕಾಳಜಿ ಇರುವುದು ನಿಜವಾಗಿದ್ದಲ್ಲಿ, ಬಿಜೆಪಿ ಶಾಸಕರ ಒಡೆತನದಲ್ಲಿರುವ ಕಬ್ಬು ಕಾರ್ಖಾನೆಗಳು ರೈತರಿಗೆ ಪಾವತಿಸಬೇಕಿರುವ ಬಾಕಿ ಹಣವನ್ನು ಮೊದಲು ಹಿಂದಿರುಗಿಸಲಿ ಎಂದು ಅವರು ಸವಾಲು ಹಾಕಿದರು.

ಬಿಜೆಪಿ ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರ ಮಾಲಕತ್ವದ ಕಾರ್ಖಾನೆಗಳು ಕಬ್ಬು ಬೆಳೆಗಾರರ ಬೆವರಿನ ಹಣವನ್ನು ಕೊಳ್ಳೆ ಹೊಡೆದಿದ್ದಾರೆ. ಬೆಳೆಗರರ ಕೋಟ್ಯಂತರ ರೂ. ಹಣವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಈ ಬಾಕಿ ಹಣವನ್ನು ಹಿಂದಿರುಗಿಸಲಾಗದವರು ರೈತರನ್ನು ದಿಕ್ಕು ತಪ್ಪಿಸಿ ರಾಜಕೀಯ ಲಾಭಕ್ಕಾಗಿ ವಿಕಾಸಸೌಧಕ್ಕೆ ಮುತ್ತಿಗೆ ಹಾಕುವ ಷಡ್ಯಂತ್ರ ರೂಪಿಸಿರುವುದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಬೆಳೆಗಾರರ ಹಣವನ್ನು ನುಂಗಿರುವ ಬಿಜೆಪಿಗೆ ರೈತರ ಪರ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.

ರೈತರ ಸಮಸ್ಯೆ ಪರಿಹರಿಸಲು ಸರಕಾರ ಸಿದ್ಧವಿದೆ. ಈ ಸಂಬಂಧ ಸಿಎಂ, ರೈತರು ಹಾಗೂ ಕಾರ್ಖಾನೆ ಮಾಲಕರ ಸಭೆ ಕರೆದು ಚರ್ಚಿಸಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಶೀಘ್ರ ಬಗೆಹರಿಯಲಿದೆ. ಆದರೆ ರೈತರು ಸುವರ್ಣ ಸೌಧದ ಗೇಟು ಒಡೆಯಲು ಮುಂದಾಗಿದ್ದು ಯಾಕೆ?  ಎಂದು ಪ್ರಶ್ನಿಸಿದ ಅವರು, ರೈತರು ಸುವರ್ಣ ಸೌಧದ ಗೇಟು ಮುರಿಯಲು ಹೋಗಿದ್ದು ಯಾಕೆಂದು ಚರ್ಚಿಸಲು ಸ್ವತಃ ಮುಖ್ಯಮಂತ್ರಿಗಳೇ ಆಹ್ವಾನ ನೀಡಿದರೂ ರೈತ ಮುಖಂಡರು  ಯಾಕೆ ಬರಲಿಲ್ಲ? ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರನ್ನು ರೌಡಿಗಳು ಎಂದಿಲ್ಲ. ಸಾರ್ವಜನಿಕ ಆಸ್ತಿ ಹಾಳು ಮಾಡಲು ಮುಂದಾದವರನ್ನು ರೌಡಿಗಳು ಎಂದು ಕರೆದಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಸೇರಿದಂತೆ ಯಾವ ಪಕ್ಷದ ಮುಖಂಡರ ಒಡೆತನದಲ್ಲಿರುವ ಕಾರ್ಖಾನೆಗಳು ರೈತರ ಬಾಕಿಯನ್ನು ಉಳಿಸಿಕೊಂಡಿದ್ದರೆ ಕೂಡಲೇ ಪಾವತಿಸಬೇಕು. ರೈತರ 480 ಕೋಟಿ ರೂ. ಬಾಕಿ ಹಣವನ್ನು ಕೊಡಿಸುವುದಾಗಿ ಸಿಎಂ ಮಾತು ನೀಡಿದ್ದು, ಈಗಾಗಲೇ 38 ಕೋ.ರೂ. ಬಿಡುಗಡೆ ಮಾಡಿದ್ದಾರೆಂದ ಅವರು, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಮೈತ್ರಿ ಸರಕಾರ ಶೀಘ್ರ ಬಗೆಹರಿಸಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ದೇವಿಪ್ರಸಾದ್, ಗಿರೀಶ್, ಎಂ.ಡಿ.ರಮೇಶ್, ನಗರಸಭೆ ಸದಸ್ಯ ದಿನೇಶ್ ಉಪಸ್ಥಿತರಿದ್ದರು.

ಸಿಎಂ ಅವರದ್ದು ಗ್ರಾಮೀಣ ಸೊಗಡಿನ ಭಾಷೆ:
ಸಿಎಂ ಕುಮಾರಸ್ವಾಮಿ ಅವರು ಇತ್ತೀಚೆಗೆ ಕಬ್ಬು ಬೆಳೆಗಾರರು ನಡೆಸಿ ಹೋರಾಟದ ವೇಳೆ ಮಹಿಳೆಯೊಬ್ಬರಿಗೆ ಗ್ರಾಮೀಣ ಸೊಗಡಿನ ಭಾಷೆಯಲ್ಲಿ "ಇದುವರೆಗೂ ಎಲ್ಲಿ ಮಲಗಿದ್ದಿ ತಾಯಿ" ಎಂದು ಹೇಳಿದ್ದಾರಷ್ಟೇ, ಬಿಜೆಪಿ ಮುಖಂಡರು ಈ ಬಗ್ಗೆ ರಾಜಕೀಯ ಲಾಭದ ದೃಷ್ಟಿಯಿಂದ ವಿವಾದ ಮಾಡುತ್ತಿದ್ದಾರೆ. ಸಿಎಂ ಕುಮಾರಸ್ವಾಮಿ ಕ್ರೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಓದಿ ಬಂದವರಲ್ಲಾ, ಗ್ರಾಮೀಣ ಪ್ರದೇಶದಲ್ಲಿ ಬೆಳೆದು ಬಂದವರು. ಅವರು ಯಾವ ತಪ್ಪು ಮಾಡಿದ್ದಾರೆಂದು ಆ ಮಹಿಳೆ 'ನಾಲಾಯಕ್ ಮುಖ್ಯಮಂತ್ರಿ' ಎಂದು ಕರೆದರು?, ಯಾವುದೇ ತಪ್ಪು ಮಾಡದ ಮುಖ್ಯಮಂತ್ರಿಯನ್ನು ನಾಲಾಯಕ್ ಎಂದು ಕರೆದಿರುವುದು ತಪ್ಪು ಎಂದು ಹೇಳುವ ವಿವೇಚನೆಯೂ ಬಿಜೆಪಿ ಅವರಿಗಿಲ್ಲ. ಆ ಮಹಿಳೆ ರೈತ ಮಹಿಳೆಯಾಗಿ ಬಂದಿದ್ದಳೋ ಅಥವಾ ಬಿಜೆಪಿ ಕಾರ್ಯಕರ್ತೆಯಾಗಿ ಬಂದಿದ್ದಳೋ ಎಂಬ ಅನುಮಾನ ಹುಟ್ಟುತ್ತಿದೆ. ನಿಜವಾದ ರೈತ ಮಹಿಳೆಯಾಗಿದ್ದರೆ ಅಂತಹ ಮಾತನ್ನಾಡುತ್ತಿರಲಿಲ್ಲ.
- ಎಸ್.ಎಲ್.ಭೋಜೇಗೌಡ, ವಿ.ಪ.ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News