ಉಪಚುನಾವಣೆಯಲ್ಲಿ ಸೋತಿದ್ದರೂ ನೈತಿಕವಾಗಿ ಗೆಲುವು ಸಾಧಿಸಿದ್ದೇನೆ: ಮಧು ಬಂಗಾರಪ್ಪ

Update: 2018-11-22 13:56 GMT

ಸೊರಬ,ನ.22: ಲೋಕಸಭಾ ಉಪಚುನಾವಣೆಯಲ್ಲಿ ನಾನು ಸೋತಿದ್ದರೂ ನೈತಿಕವಾಗಿ ಗೆಲುವು ಸಾಧಿಸಿದ್ದೇನೆ. ಜಿಲ್ಲೆ ಸಂಪೂರ್ಣ ತಮ್ಮ ಹಿಡಿತದಲ್ಲಿದೆ ಎಂದು ಭ್ರಮೆಯಲ್ಲಿದ್ದವರಿಗೆ ಮತದಾರರು ಬೆವರಿಳಿಸಿದ್ದಾರೆ ಎಂದು ಲೋಕಸಭಾ ಉಪಚುನಾವಣಾ ಪರಾಜಿತ ಅಭ್ಯರ್ಥಿ ಮಧುಬಂಗಾರಪ್ಪ ತಿಳಿಸಿದರು.

ಪಟ್ಟಣದ ಬಂಗಾರಧಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಮತದಾರರಿಗೆ, ಕಾರ್ಯಕರ್ತರಿಗೆ, ಹಾಗೂ ಮುಖಂಡರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು. ಬಗರ್ ಹುಕುಂ ಸಾಗುವಳಿದಾರರಿಗೆ ಮತ್ತು ಸಾಮಾಜಿಕವಾಗಿ ಶೋಷಣೆಗೊಳಗಾಗಿದ್ದ ಜನರಿಗೆ ದ್ರೋಹ ಬಗೆದಿರುವ ಬಿಜೆಪಿ ಮತ್ತು ಯಡಿಯೂರಪ್ಪನವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಯಡಿಯೂರಪ್ಪನವರಂತೆ ಬಗರುಹುಕುಂ ಸಾಗುವಳಿದಾರರನ್ನು ಜೈಲಿಗೆ ಕಳಿಸುವ ಕಾರ್ಯವನ್ನು ನಾನಾಗಲಿ ಕಾಗೋಡು ತಿಮ್ಮಪ್ಪನವರಾಗಲಿ ಎಂದೂ ಮಾಡಿಲ್ಲ. ಪ್ರಧಾನಿ ಮೋದಿಯವರು ಕಾರ್ಪೋರೇಟ್ ಸಂಸ್ಥೆಗಳ ಪರವಿರುವ ಸರದಾರ. ಇವರಿಂದ ಕಳೆದ ಚುನಾವಣೆಯಲ್ಲಿ ಘೋಷಿಸಿದ್ದ ಯಾವುದೇ ಯೋಜನೆಗಳು ಅನುಷ್ಟಾನಗೊಂಡಿಲ್ಲ ಎಂದರು. 

ಈ ಹಿಂದೆ ನಾನು ಶಾಸಕನಾಗಿದ್ದಾಗ ತಾಲೂಕಿನ ಅಭಿವೃದ್ದಿಗಾಗಿ ತಂದ ಅನುದಾನದಲ್ಲೇ ಈಗಿನ ಹಾಲಿ ಶಾಸಕ ಕುಮಾರ್ ಬಂಗಾರಪ್ಪ ಗುದ್ದಲಿ ಪೂಜೆ, ಉದ್ಘಾಟನೆ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ. ಶಾಸಕನಾಗಿ 6 ತಿಂಗಳುಗಳಾದರೂ ಸರ್ಕಾರದಿಂದ ಒಂದೇ ಒಂದು ನಯಾಪೈಸೆ ತರಲು ತಾಕತ್ತು ಇಲ್ಲದ ಇವರು, ನಾನೇ ಅನುದಾನ ತಂದು ಅಭಿವೃದ್ದಿ ಪಡಿಸುತ್ತಿದ್ದೇನೆಂದು ಜನರಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದ ಅವರು, ತಾಲೂಕಿನ ಅಭಿವೃದ್ದಿಗೆ ಶ್ರಮಿಸದ ಇವರು ಸರ್ಕಾರವೇ ಇಲ್ಲದ ಪಕ್ಷದಿಂದ ಗೆಲುವು ಸಾಧಿಸಿದ್ದು, ಅನುದಾನ ತರಲು ಹೇಗೆ ಸಾಧ್ಯ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ರಾಮನೆ ಮೂಲ ಮಂತ್ರ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಇವರು ಜನರೊಂದಿಗೆ ಹೇಳಿಕೊಳ್ಳಲಾಗದೆ ಅನಿವಾರ್ಯವಾಗಿ ರಾಮನ ಹೆಸರಲ್ಲಿ ಮತ ಕೇಳಬೇಕಾಗಿದೆ. ಅಗತ್ಯ ಬಿದ್ದಾಗ ಮಾತ್ರ ರಾಮನನ್ನು ನೆನೆಸುವ ಇವರಿಗೆ, ಆ ರಾಮನೆ ಬಿಜೆಪಿಯ ಗಂಟುಮೂಟೆ ಕಟ್ಟಿಸಲಿದ್ದಾನೆ ಎಂದು ಭವಿಷ್ಯ ನುಡಿದರು.

ಸಭೆಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಜಿಲ್ಲಾಧ್ಯಕ್ಷ ಮಂಜುನಾಥ್‍ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀ.ನಾ. ಶ್ರೀನಿವಾಸ್, ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಹೆಚ್.ಗಣಪತಿ, ಚೌಟಿ ಚಂದ್ರ ಶೇಖರ್ ಪಾಟೀಲ್, ಕೆ.ಪಿ.ರುದ್ರಗೌಡ, ಜಿಪಂ. ಸದಸ್ಯ ಶಿವಲಿಂಗೇಗೌಡ, ತಾರಶಿವಾನಂದ್, ರಾಜೇಶ್ವರಿ, ತಾಪಂ.ಉಪಾಧ್ಯಕ್ಷ ಸುರೇಶ್, ಪಪಂ. ಅಧ್ಯಕ್ಷೆ ಬೀಬಿ. ಝುಲೇಖಾ, ಪ್ರಮುಖರಾದ ರಾಜು ತಲ್ಲೂರು, ನಾಗರಾಜ್ ಚಂದ್ರಗುತ್ತಿ, ಅಜ್ಜಪ್ಪ, ಜೈಶೀಲಗೌಡ, ಬಂಗಾರಪ್ಪಗೌಡ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News