ಇರಾನ್‌ನಲ್ಲಿ ಸಂಕಷ್ಟದಲ್ಲಿರುವ ರಾಜ್ಯದ ಮೀನುಗಾರರು: ನೆರವು ಕೋರಿ ಸುಷ್ಮಾ ಸ್ವರಾಜ್‌ಗೆ ಸಚಿವ ದೇಶಪಾಂಡೆ ಪತ್ರ

Update: 2018-11-22 14:39 GMT
ಸಚಿವ ದೇಶಪಾಂಡೆ-ಸುಷ್ಮಾ ಸ್ವರಾಜ್‌

ಬೆಂಗಳೂರು, ನ. 22: ಇರಾನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ರಾಜ್ಯದ ಭಟ್ಕಳ ಮತ್ತು ಕುಮಟಾ ತಾಲೂಕಿನ 18 ಮೀನುಗಾರರನ್ನು ಆದಷ್ಟು ಬೇಗ ಸುರಕ್ಷಿತವಾಗಿ ಬಿಡುಗಡೆಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.

ದುಬೈನ ಮೀನುಗಾರಿಕೆ ದೋಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇಷ್ಟೂ ಜನ ತಮಗೆ ಗೊತ್ತಿಲ್ಲದೆಯೇ ಇರಾನ್‌ನ ಜಲಪ್ರದೇಶವನ್ನು ಪ್ರವೇಶಿಸಿದ್ದರ ಪರಿಣಾಮವಾಗಿ ಇರಾನ್ ಸೇನೆಯಿಂದ ಬಂಧಿತರಾಗಿದ್ದಾರೆ. ಜುಲೈ 27ರಿಂದಲೂ ಇದೇ ಸ್ಥಿತಿಯಲಿರುವ ಇವರನ್ನೆಲ್ಲ ಆ ದೇಶದ ಕಿಶ್ ದ್ವೀಪದಲ್ಲಿ ಇಡಲಾಗಿದೆ. ಇವರೆಲ್ಲರ ಬಂಧನದಿಂದ ಇವರ ಕುಟುಂಬಗಳು ಕಂಗಾಲಾಗಿದ್ದು, ಇವರ ನೆರವಿಗೆ ಕೂಡಲೇ ಧಾವಿಸಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ದೇಶಪಾಂಡೆ ಹೇಳಿದ್ದಾರೆ.

ಬಂಧಿತ ಮೀನುಗಾರರೆಲ್ಲ ಬಡಕುಟುಂಬದವರಾಗಿದ್ದು, ಮೀನುಗಾರಿಕೆಯನ್ನು ಮಾತ್ರ ಬಲ್ಲವರಾಗಿದ್ದಾರೆ. ಭಾರತೀಯರು ವಿದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಂಡಾಗಲೆಲ್ಲ ನೆರವಿಗೆ ಧಾವಿಸುವ ಕೇಂದ್ರ ಸರಕಾರವು ಈಗಲೂ ಇವರಿಗೆ ಅಗತ್ಯ ನೆರವು ನೀಡುವುದಲ್ಲದೆ, ಆದಷ್ಟು ಬೇಗ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.

ದೇಶಪಾಂಡೆಯವರು ತಮ್ಮ ಪತ್ರದ ಜತೆಗೆ ಬಂಧಿತ ಮೀನುಗಾರರಿಗೆ ಸಂಬಂಧಿಸಿದ ವಿವರಗಳು ಮತ್ತು ಪಾಸ್‌ಪೋರ್ಟ್ ಸಂಖ್ಯೆಯನ್ನೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News