ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಸಮಿತಿ ರಚನೆ: ಉಸ್ತುವಾರಿ ಸಚಿವ ಝಮೀರ್ ಅಹ್ಮದ್
ಹಾವೇರಿ, ನ.22: ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಪಕ್ಷಾತೀತವಾಗಿ ಎಲ್ಲ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ)ಗಳ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ, ಪಕ್ಷಭೇದ ಮರೆತು ಕೆಲಸ ಮಾಡೋಣ. ಇದಕ್ಕಾಗಿ ವಿಶೇಷವಾದ ಸಮಿತಿ ರಚಿಸಿ, ಪ್ರತಿ ತಿಂಗಳು ಸಭೆ ನಡೆಸೋಣ. ಹಾವೇರಿಯಲ್ಲಿ ಒಂದು ತಿಂಗಳು, ಬೆಂಗಳೂರಿನಲ್ಲಿ ಮತ್ತೊಂದು ತಿಂಗಳಿನಂತೆ ಸಭೆ ನಡೆಸೋಣ. ಜಿಲ್ಲೆಯ ಸಮಸ್ಯೆಗಳನ್ನು ಪಟ್ಟಿ ಮಾಡಿ ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರನ್ನು ಆಹ್ವಾನಿಸಿ ಪರಿಹಾರ ಕಂಡುಕೊಳ್ಳೋಣ ಎಂದು ಅವರು ತಿಳಿಸಿದರು.
ಸಭೆಯ ಆರಂಭದಲ್ಲೇ ಬೈರನಪಾದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆದಿದೆ ಎಂದು ಶಾಸಕ ಬಿ.ಸಿ.ಪಾಟೀಲ್ ಸೇರಿದಂತೆ ವಿವಿಧ ಶಾಸಕರು ಆಕ್ಷೇಪಣೆ ವ್ಯಕ್ತಪಡಿಸಿದರು. ಈ ಕುರಿತಂತೆ ಸಮಗ್ರ ತನಿಖೆಗೆ ಜಿಲ್ಲಾ ಮಟ್ಟದ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಹಿಸಲು ನಿರ್ಧರಿಸಲಾಯಿತು.
ಮುಂಗಾರು ಮತ್ತು ಹಿಂಗಾರು ಹಂಗಾಮಿನ ಮಳೆ ಅಭಾವದಿಂದ ತೀವ್ರವಾದ ಬೆಳೆ ನಷ್ಟವಾಗಿದೆ. ಸರಕಾರ ಕೇವಲ ರಾಣೇಬೆನ್ನೂರು ತಾಲೂಕನ್ನು ಮಾತ್ರ ಬರಪೀಡಿತ ವೆಂದು ಘೋಷಿಸಿದೆ. ಇಡೀ ಹಾವೇರಿ ಜಿಲ್ಲೆಯಲ್ಲಿ ಬೆಳೆಹಾನಿಯಾಗಿದ್ದು, ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕು ಎಂದು ಶಾಸಕರು ಸಭೆಯಲ್ಲಿ ಮನವಿ ಮಾಡಿದರು.
ಈ ಸಂಬಂಧ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಝಮೀರ್ ಅಹ್ಮದ್, ನಾನು ರಾಜ್ಯ ಬರ ಅಧ್ಯಯನ ಸಮಿತಿಯ ಸದಸ್ಯನಾಗಿದ್ದು, ಜಿಲ್ಲೆಯ ಸ್ಥಿತಿಗತಿ ಕುರಿತಂತೆ ಪೂರ್ಣ ಮಾಹಿತಿ ಪಡೆದು ಬರ ಘೋಷಣೆಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ತಕ್ಷಣ ಅಧಿಕಾರಿಗಳು ಕ್ರಿಯಾಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನು ಪಟ್ಟಿಮಾಡಬೇಕು. ಪಯಾರ್ಯವಾಗಿ ನೀರಿನ ಮೂಲಗಳನ್ನು ಗುರುತಿಸಿಕೊಳ್ಳಬೇಕು ಎಂದು ಅವರು ಸೂಚಿಸಿದರು. ತಳಮಟ್ಟದಲ್ಲಿ ಗ್ರಾಮವಾರು ಸರ್ವೇ ನಡೆಸಿ ವರದಿ ಸಲ್ಲಿಸಬೇಕು. ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ ಹಾಗೂ ಹುಡುಗಾಟಿಕೆ ಮಾತುಗಳನ್ನು ನಾನು ಸಹಿಸುವುದಿಲ್ಲ. ಜನರು ನೀರಿನ ಸಮಸ್ಯೆಯಿಂದ ಬಳಲಿದರೆ, ಕಾರ್ಯ ವಿಳಂಬ ಮಾಡಿದರೆ ಶಿಸ್ತು ಕ್ರಮಕೈಗೊಳ್ಳುವುದಾಗಿ ಝಮೀರ್ ಅಹ್ಮದ್ ಎಚ್ಚರಿಕೆ ನೀಡಿದರು.
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸಲು ಬಸವರಾಜ ಬೊಮ್ಮಾಯಿ ಸೇರಿದಂತೆ ವಿವಿಧ ಶಾಸಕರು ಗಮನಕ್ಕೆ ತಂದಾಗ ವಸತಿ ನಿಲಯಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ದೂರವಾಣಿ ಸಂಪರ್ಕ ಮಾಡಿ 15 ದಿನದೊಳಗಾಗಿ ಜಿಲ್ಲೆಯ ವಿವಿಧ ಇಲಾಖೆಯ ವಸತಿ ಶಾಲೆಗಳ ಕುಡಿಯುವ ನೀರಿನ ಸಮಸ್ಯೆಗಳನ್ನು ನೀಗಿಸುವಂತೆ ಸೂಚನೆ ನೀಡಿದರು.
ಶಾಲಾ ಕಟ್ಟಡಗಳ ನಿರ್ವಹಣೆಗೆ ಸರಕಾರದಿಂದ ಹಣ ಬಿಡುಗಡೆಯಾದರೂ ಅದನ್ನು ಅನುಷ್ಠಾನಗೊಳಿಸಲು ವಿಳಂಬವಾಗಿದೆ. ಈ ಕಾರಣದಿಂದ ಶಿಥಿಲವಾದ ಅಪಾಯಕಾರಿ ಕಟ್ಟಡದಲ್ಲಿ ಮಕ್ಕಳು ಪಾಠ ಕೇಳುವಂತಾಗಿದೆ. ನಿಮ್ಮ ಆಡಳಿತದ ನಿರ್ಲಕ್ಷದಿಂದ ಮಕ್ಕಳು ಕಷ್ಟ ಅನುಭವಿಸುತ್ತಿದ್ದಾರೆ. ಕೇವಲ ಪಾಠ ಮಾಡುವುದಾದರೆ ಬಿಇಓ, ಡಿಡಿಪಿಐ ಹುದ್ದೆಗಳು ಏತಕ್ಕೆ ಬೇಕು. ಶಾಲಾ ಮುಖ್ಯೋಪಾಧ್ಯಾಯರು ಸಾಕಲ್ಲವೇ ಎಂದು ಶಾಸಕರು, ಶಿಕ್ಷಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಂಕಾಪುರ, ಹಾನಗಲ್ ಸೇರಿದಂತೆ ಸ್ಥಳೀಯ ಕೃಷಿ ಅಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷದಿಂದ ಪ್ರೀಮಿಯಂ ತುಂಬಿದರು. ರೈತರಿಗೆ 30 ರಿಂದ 40 ಕೋಟಿ ರೂ. ಪರಿಹಾರ ಹಣ ಬಂದಿಲ್ಲ. ಕೆಲವೆಡೆ ಮಳೆಯಾಶ್ರಿತ ಬೆಳೆಗಳನ್ನು ನೀರಾವರಿ ಎಂದು ನಮೂದಿಸಲಾಗಿದೆ. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ ಎಂದು ಶಾಸಕರು ಸಭೆಯ ಗಮನ ಸೆಳೆದರು.
ಸಭೆಯಲ್ಲಿ ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ, ಶಾಸಕರಾದ ಬಸವರಾಜ ಬೊಮ್ಮಾಯಿ, ಬಿ.ಸಿ.ಪಾಟೀಲ್, ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿ.ಪಂ.ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿ.ಪಂ. ಸಿಇಓ ಲೀಲಾವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.