×
Ad

ದೇಶದ ಉಳಿವಿನ ಅನಿವಾರ್ಯತೆಗಾಗಿ ‘ಮೈತ್ರಿ’: ಮಾಜಿ ಪ್ರಧಾನಿ ದೇವೇಗೌಡ

Update: 2018-11-22 20:40 IST

ಬಳ್ಳಾರಿ, ನ. 22: ‘ನಾವು ಅಧಿಕಾರಕ್ಕಾಗಿ ಒಂದಾಗಿಲ್ಲ. ಬದಲಿಗೆ ಈ ದೇಶದ ಉಳಿವಿನ ಅನಿವಾರ್ಯತೆಯಿಂದ ಒಂದಾಗಿದ್ದೇವೆ. ಕೇಂದ್ರ ಸರಕಾರ ಸಿಬಿಐ ಸೇರಿದಂತೆ ವಿವಿಧ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ’ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಗುರುವಾರ ಬಳ್ಳಾರಿಯ ಮುನ್ಸಿಪಲ್ ಮೈದಾನದಲ್ಲಿ ಏರ್ಪಡಿಸಿದ್ದ ಕೃತಜ್ಞತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ಮಾಡುತ್ತಿದೆ. ಹೀಗಾಗಿ ಉಪ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದರು.

ಬಿಜೆಪಿಯ ಅಬ್ಬರದ ಪ್ರಚಾರ, ವ್ಯವಸ್ಥೆಗೆ ಅಗೌರವ ತರುವ ಶಬ್ದ ಬಳಕೆ ಎಷ್ಟು ಸರಿ ಎಂದು ಪ್ರಶ್ನಿಸಿದ ದೇವೇಗೌಡ, ಪ್ರಧಾನಿ ಮೋದಿ ಕಳೆದ ನಾಲ್ಕೂವರೇ ವರ್ಷದಲ್ಲಿ ಅತ್ಯಂತ ಕೆಟ್ಟ ಆಡಳಿತ ನಡೆಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಉಗ್ರಪ್ಪನವರು ಬಳ್ಳಾರಿಯಿಂದ ಮೊದಲ ಬಾರಿಗೆ ಸ್ಪರ್ಧೆ ಮಾಡಿ, ಅತ್ಯಂತ ಹೆಚ್ಚು ಬಹುಮತದಿಂದ ಆಯ್ಕೆಯಾಗಿದ್ದಾರೆ. ಅವರನ್ನು ಜಿಲ್ಲೆಯ ಮತದಾರರು ಆಯ್ಕೆ ಮಾಡಿದ್ದು, ಅವರು ಅನುಭವಿ ರಾಜಕಾರಣಿ. ಸೋನಿಯಾ ಗಾಂಧಿಯವರು ಗೆದ್ದ ನಂತರ ಉಗ್ರಪ್ಪ ಗೆದ್ದಿದ್ದಾರೆಂದು ದೇವೇಗೌಡ ನೆನಪು ಮಾಡಿಕೊಂಡಿದರು.

ಹದಿನೆಂಟು ವರ್ಷ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಇದೀಗ ಉಪ ಚುನಾವಣೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಉಸ್ತುವಾರಿ ವಹಿಸಿಕೊಂಡು, ಚುನಾವಣೆ ಗೆದ್ದಿದ್ದೇವೆ ಎಂದ ಅವರು, ನಾಯಕ ಸಮಾಜದ ಮೀಸಲಾತಿಗೆ ಮತ್ತು ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಉಗ್ರಪ್ಪ ಶ್ರಮಿಸಿದ್ದಾರೆ ಎಂದರು.

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಬಾಂಧವರ ಮೇಲೆ ದೌರ್ಜನ್ಯ, ಬಾಬರಿ ಮಸೀದಿ, ಗೋಧ್ರಾ ಹತ್ಯಾಕಾಂಡ, ದಲಿತ ವರ್ಗದ ಜನರಿಗೆ ಬಟ್ಟೆ ಬಿಚ್ಚಿ ಗುಜರಾತ್‌ನಲ್ಲಿ ಓಡಿಸಿದ್ದಾರೆ. ಇಂತಹ ಅನೇಕ ಘಟನೆಗಳು ದೇಶದಲ್ಲಿ ನಡೆಯುತ್ತಿದ್ದು, ಬಿಜೆಪಿಯನ್ನು ಕಿತ್ತೊಗೆಯಲು ಇಷ್ಟು ಸಾಕು ಎಂದು ದೇವೇಗೌಡ ಹೇಳಿದರು.

ಬಳ್ಳಾರಿ, ಮಂಡ್ಯ, ಜಮಖಂಡಿ, ರಾಮನಗರದಲ್ಲಿ ನಾವು ಗೆದ್ದಿದ್ದೇವೆ. ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದ ಅವರು, ರಾಹುಲ್ ಗಾಂಧಿ ಸಣ್ಣ ವಯಸ್ಸಿನಲ್ಲೆ ಎಐಸಿಸಿ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲೆ ಮುಂದಿನ ಲೋಕಸಭೆ ಚುನಾವಣೆ ನಡೆಯಲಿದ್ದು, ಉಗ್ರಪ್ಪ ಮತ್ತೆ ಸ್ಪರ್ಧಿಸಲಿದ್ದು, ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಸಂಸದ ವಿ.ಎಸ್.ಉಗ್ರಪ್ಪ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.

‘ಬಿಎಸ್‌ವೈ ಸೇರಿದಂತೆ ಬಿಜೆಪಿ ಮುಖಂಡರು ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಹೊಸ ಸರಕಾರ ರಚನೆ ಮಾಡುತ್ತೇವೆ ಎಂದಿದ್ದರು. ಶ್ರೀರಾಮುಲು ಅಣ್ಣನವರು ‘ಶಾಂತ ಸಂಸತ್‌ಗೆ, ಡಿಕೆಶಿ ಜೈಲಿಗೆ’ ಅಂದಿದ್ದರು. ಆದರೆ, ಫಲಿತಾಂಶ ದೇಶಕ್ಕೇನು ಸಂದೇಶ ನೀಡಿತು. ಈ ಗೆಲುವು, ಬಳ್ಳಾರಿ ಜನರ ಸ್ವಾಭಿಮಾನದ ಗೆಲುವು. ಸಂಸತ್‌ನಲ್ಲಿ ಬಳ್ಳಾರಿ ಜನರ ಧ್ವನಿ ಇರಲಿಲ್ಲ. ಇನ್ನು ಮುಂದೆ ಉಗ್ರಪ್ಪನಿಮ್ಮ ಧ್ವನಿಯಾಗಲಿದ್ದಾರೆ. ಜಿಲ್ಲೆ ಅಭಿವೃದ್ದಿಗೆ ಸಿಎಂ ಮನವೊಲಿಸಿ ವಿಶೇಷ ಪ್ಯಾಕೇಜ್ ತರುವೆ’

-ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News