ಶಿಫಾರಸ್ಸು ಬಳಸಿ ವರ್ಗಾವಣೆ ಬಯಸುವವರಿಗೆ ಕಡ್ಡಾಯ ನಿವೃತ್ತಿ !

Update: 2018-11-22 15:20 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.22: ವಿವಿಧ ಠಾಣೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಅನಾರೋಗ್ಯ ಅಥವಾ ಸಚಿವ-ಶಾಸಕರ ಶಿಫಾರಸ್ಸುಗಳನ್ನು ಬಳಸಿ ತಮಗೆ ಬೇಕಾದ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಮುಂದಾಗುವ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ಅಸ್ತ್ರ ಬಳಕೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ಅನಾರೋಗ್ಯದ ಕಾರಣವನ್ನಿಟ್ಟುಕೊಂಡು ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ತಮಗೆ ಬೇಕಾದ ಠಾಣೆಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಸಿಬ್ಬಂದಿ ಮುಂದಾಗಿರುವುದು ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯ ಹಾಗೂ ಜನಪ್ರತಿನಿಧಿಗಳ ಶಿಫಾರಸು ಪಡೆದು ಆಯಕಟ್ಟಿನ ಪೊಲೀಸ್ ಠಾಣೆಗೆ ವರ್ಗಾವಣೆ ಪಡೆದುಕೊಳ್ಳುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಇಲಾಖೆ ‘ಅಂತಹವರು ನಮ್ಮ ಇಲಾಖೆಯಲ್ಲಿ ಕೆಲಸ ಮಾಡಲು ಅರ್ಹರಲ್ಲ’ ಎಂದು ನಮೂದಿಸಿ ಕೆಸಿಎಸ್‌ಆರ್ ನಿಯಮ ಅನ್ವಯ ಕಡ್ಡಾಯ ನಿವೃತ್ತಿ ಮಾಡಲು ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

ಕನಿಷ್ಠ ವರ್ಗಾವಣೆ ಅವಧಿ ಪೂರೈಸದೆ, ಗಂಭೀರ ಅನಾರೋಗ್ಯ ಸಮಸ್ಯೆ ಇಲ್ಲದಿದ್ದರೂ, ಸಾಮಾನ್ಯ ಅನಾರೋಗ್ಯ ಕಾರಣಗಳಿಗೆ ವರ್ಗಾವಣೆ ಮಾಡುವಂತೆ ಮನವಿ ಸಲ್ಲಿಸುವ ಸಿಬ್ಬಂದಿಯನ್ನು ಕಡ್ಡಾಯ ನಿವೃತ್ತಿಗೆ ಪರಿಗಣನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ವರ್ಗಾವಣೆ ಅವಧಿ ಪೂರೈಸದೆ ಅನಾರೋಗ್ಯದ ಆಧಾರದಲ್ಲಿ ವರ್ಗಾವಣೆ ಬಯಸುವ ಸಿಬ್ಬಂದಿ ನೇರವಾಗಿ ವರ್ಗಾವಣೆ ಬಯಸಿ ಪದೇ ಪದೆ ಮನವಿ ಸಲ್ಲಿಸಿದರೆ ಕೆಸಿಎಸ್‌ಆರ್ ನಿಯಮಾವಳಿ 285ರ ಅಡಿಯ ಅವಕಾಶ ಬಳಸಿ ಕಡ್ಡಾಯ ನಿವೃತ್ತಿಗೊಳಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ. ಈ ವಿಚಾರದಲ್ಲಿ ಘಟಕಾಧಿಕಾರಿಗಳಿಗೆ ಅಧಿಕಾರವಿದೆ. ಹೀಗಾಗಿ ಅವರ ಘಟಕಗಳಲ್ಲಿರುವ ಪರಿಸ್ಥಿತಿಗೆ ಅನುಗುಣವಾಗಿ ಅವರೇ ಕ್ರಮವಹಿಸುತ್ತಿದ್ದಾರೆ ಎಂದು ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಡಿಜಿಪಿ ಚಾಟಿ: ಕೆಲದಿನಗಳ ಹಿಂದಷ್ಟೇ ವರ್ಗಾವಣೆ ವಿಚಾರದಲ್ಲಿ ಡಿವೈಎಸ್‌ಪಿ, ಇನ್ಸ್‌ಪೆಕ್ಟರ್ ಸೇರಿ ಹಿರಿಯ ಅಧಿಕಾರಿಗಳಿಗೂ ಬಿಸಿಮುಟ್ಟಿಸಿದ್ದ ಡಿಜಿಪಿ ನೀಲಮಣಿ ರಾಜು, ವರ್ಗಾವಣೆ ಸಮಯದಲ್ಲಿಯೇ ಪದೇ ಪದೇ ವೈದ್ಯಕೀಯ ರಜೆ ಪಡೆಯುವ ಪೊಲೀಸ್ ಸಿಬ್ಬಂದಿ ಎಕ್ಸಿಕ್ಯೂಟೀವ್ ಹುದ್ದೆ ನಿರ್ವಹಿಸುವುದು ಸೂಕ್ತವಲ್ಲ. ಅವರ ದೈಹಿಕ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಪರಿಗಣಿಸಿ ಕಡ್ಡಾಯವಾಗಿ 6 ತಿಂಗಳು ಅಥವಾ 1 ವರ್ಷ ನಾನ್ ಎಕ್ಸಿಕ್ಯೂಟೀವ್ ಹುದ್ದೆಗೆ ವರ್ಗಾಯಿಸುವ ಶಿಫಾರಸಿನ ಕುರಿತು ಸುತ್ತೋಲೆ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News