ಜನರು ಗುಳೆ ಹೋಗದಂತೆ ನೋಡಿಕೊಳ್ಳಿ: ಸಂಸದ ಸಿದ್ದೇಶ್ವರ

Update: 2018-11-22 17:28 GMT

ದಾವಣಗೆರೆ, ನ.22: ಜಿಲ್ಲೆಯಲ್ಲಿ ಜನರು ದುಡಿಯೆ ಇಲ್ಲವೆಂದು ಬೇರೆ ಪ್ರದೇಶಗಳಿಗೆ ಗುಳೆ ಹೋಗುವುದನ್ನು ತಪ್ಪಿಸಬೇಕು. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.

ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(DISHA) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರು, ಫಸಲ್ ಬಿಮಾ ಸೇರಿದಂತೆ ಯೋಜನೆಗಳು ಜನರಿಗೆ ಶೀಘ್ರ ತಲುಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಗಳೂರು ತಾಲೂಕಿನ ಬಸವನಕೋಟೆ ಗ್ರಾಪಂನಲ್ಲಿ ನರೇಗ ಯೋಜನೆಯಡಿ ಸುಮಾರು 40 ಲಕ್ಷ ರೂ. ರಸ್ತೆ ಮತ್ತು ಇತರ ಕಾಮಗಾರಿಗಳಲ್ಲಿ ದುರುಪಯೋಗವಾಗಿದ್ದು ಅದಕ್ಕೆ ಸಂಬಂಧಿಸಿದ 13 ಕಡತಗಳನ್ನು ಪರಿಶೀಲಿಸಲು ಹಿಂದಿನ ಸಭೆಯಲ್ಲಿ ಸೂಚಿಸಿದನ್ವಯ 12 ಕಡತಗಳನ್ನು ಪರಿಶೀಲಿಸಲಾಗಿ ಕಾಮಗಾರಿ ನಡೆದಿರುವ ದಾಖಲೆಗಳು ಲಭ್ಯವಾಗಿವೆ. ಒಂದು ಕಡತ ಲಭ್ಯವಿಲ್ಲವೆಂದು ಜಗಳೂರು ಇಒ ಸಭೆಗೆ ತಿಳಿಸಿದರು.

ಸಂಸದರು ಮಾತನಾಡಿ, ಜಿಲ್ಲೆಯಾದ್ಯಂತ ನರೇಗ ಯೋಜನೆಯಡಿ ಅನೇಕ ಲೋಪಗಳು ಕಾಣುತ್ತಿವೆ. ನಿರ್ಲಕ್ಷ್ಯ ತೋರಿದ ಹಾಗೂ ಯೋಜನೆ ದುರುಪಯೋಗಪಡಿಸಿಕೊಂಡವರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು. ಇದಕ್ಕೆ ಜಿಪಂ ಸಿಇಒ ಎಸ್. ಅಶ್ವತಿ ಪ್ರತಿಕ್ರಿಯಿಸಿ ಈ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಓಂಬುಡ್ಸ್ ಮನ್‌ಗೆ ವಹಿಲಾಗುವುದು ಎಂದರು.

ಸಂಸದರು ಮಾತನಾಡಿ, ಇತ್ತೀಚೆಗೆ ಪತ್ರಿಕೆಗಳಲ್ಲಿ ಹರಪನಹಳ್ಳಿ ತಾಲೂಕಿನ ಜನರು ಸೇರಿದಂತೆ ಜಿಲ್ಲೆಯಲ್ಲಿ ಕೆಲಸ ಲಭ್ಯವಿಲ್ಲದೆ, ಗುಳೇ ಹೋಗುತ್ತಿದ್ದಾರೆಂದು ವರದಿಯಾಗುತ್ತಿವೆ. ಜಿಲ್ಲೆಯ ಯಾವ ಜನತೆಯೂ ಗುಳೆ ಹೋಗದಂತೆ ನೋಡಿಕೊಳ್ಳಬೇಕು. ಗುಳೆ ಹೋಗುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೂ ತೊಂದರೆಯಾಗುತ್ತದೆ ಎಂದರು. ಡಿಸಿ ಡಾ.ಬಗಾದಿ ಗೌತಮ್ ಮಾತನಾಡಿ, ಬರ ಘೋಷಿತ ತಾಲೂಕುಗಳ ಘೋಷಣೆ ನಂತರ ಕೇಂದ್ರ ಸರಕಾರ ಬರ ಪೀಡಿತ ಪ್ರದೇಶಗಳಲ್ಲಿ 100 ಮಾನವ ದಿನಗಳಿಂದ 150 ಮಾನವ ದಿನಗಳಿಗೆ ಹೆಚ್ಚಿಸಿದೆ. ಒಂದೆರಡು ದಿನಗಳಲ್ಲಿ ನರೇಗ ಯೋಜನೆಯಡಿ 150 ದಿನಗಳ ಸೇರ್ಪಡೆಯಾಗಿ ಹರಿಹರ, ದಾವಣಗೆರೆ ಹರಪನಹಳ್ಳಿ ಮತ್ತು ಜಗಳೂರಿನಲ್ಲಿ ಜಾರಿಗೆ ಬರಲಿದೆ ಎಂದರು.

ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿದರು. ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಿತು. ಸಭೆಯಲ್ಲಿ ಜಿಪಂ ನಾಮನಿರ್ದೇಶಿತ ಸದಸ್ಯರು, ತಾಪಂ, ಗ್ರಾಪಂ ಅಧ್ಯಕ್ಷರು, ಜಿಪಂ ಉಪಕಾರ್ಯದರ್ಶಿ ಜಿ ಎಸ್ ಷಡಾಕ್ಷರಪ್ಪ ಅಧಿಕಾರಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News