ದಾವಣಗೆರೆ: ಶಬರಿಮಲೆ ಬಿಕ್ಕಟ್ಟು ಪರಿಹರಿಸಲು ಒತ್ತಾಯಿಸಿ ಅಯ್ಯಪ್ಪ ಸ್ವಾಮಿ ಭಕ್ತರಿಂದ ಧರಣಿ

Update: 2018-11-22 17:34 GMT

ದಾವಣಗೆರೆ,ನ.22: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕುರಿತಂತೆ ಉಂಟಾದ ಬಿಕ್ಕಟ್ಟನ್ನು ಪರಿಹರಿಸುವಂತೆ ಒತ್ತಾಯಿಸಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. 

ನಗರದ ಶ್ರೀ ಜಯದೇವ ವೃತ್ತದಲ್ಲಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರು ಹಳೆ ಪಿ.ಬಿ.ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಕೇರಳ ಸರ್ಕಾರದ ಹಿಂದು ವಿರೋಧಿ ಧೋರಣೆ ಖಂಡಿಸಿ ಘೋಷಣೆ ಕೂಗುತ್ತಾ, ಉಪ ವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಿದರು. 

ಈ ಸಂದರ್ಭ ಮಾತನಾಡಿದ ಸಮಿತಿ ಮುಖಂಡರು, ಶಬರಿಮಲೆ ಶ್ರೀಕ್ಷೇತ್ರಕ್ಕೆ ಈವರೆಗೆ ನಿರ್ಬಂಧಿಸಿದ್ದ ಮಹಿಳೆಯರ ಪ್ರವೇಶವನ್ನು ಸರ್ವೋಚ್ಛ ನ್ಯಾಯಾಲಯದ ಆದೇಶದ ಮೂಲಕ ತೆರವುಗೊಳಿಸಲಾಗಿದೆ. ಈ ಕ್ರಮ ಸ್ವಾಗತಾರ್ಹ. ಆದರೆ, ಶತ ಶತಮಾನಗಳಿಂದಲೂ ಶ್ರೀ ಕ್ಷೇತ್ರದಲ್ಲಿ 10ರಿಂದ 50 ವರ್ಷದ ವಯಸ್ಸಿನ ಮಹಿಳೆಯರ ಪ್ರವೇಶವನ್ನು ಧಾರ್ಮಿಕ ಹಾಗೂ ಅಲ್ಲಿನ ಪರಂಪರೆ, ಪದ್ಧತಿ ಪ್ರಕಾರ ಪ್ರವೇಶ ನಿರಾಕರಿಸಲಾಗಿದೆಯಷ್ಟೇ ಎಂದರು. 

ಸುಪ್ರೀಂ ಕೋರ್ಟ್‍ನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತರ ನಂಬಿಕೆಗೆ ಪೂರಕವಾಗುವಂತೆ ಮೇಲ್ಮನವಿ ಸಲ್ಲಿಸಬೇಕು. ಮರು ಪರಿಶೀಲನಾ ಅರ್ಜಿ ವಿಚಾರಣೆ ಹಂತದಲ್ಲಿದ್ದಾಗಲೇ ಆದೇಶವನ್ನೇ ನೆಪವಾಗಿಟ್ಟುಕೊಂಡು 10ರಿಂದ 50 ವರ್ಷದೊಳಗಿನ ಮಹಿಳೆಯರು ಯಾವುದೇ ಕಾರಣಕ್ಕೂ ಶಬರಿಮಲೆ ಪ್ರವೇಶಿಸುವ ಪ್ರಯತ್ನವನ್ನು ಮಾಡಬಾರದು. ಶಬರಿಮಲೆ ವಿಚಾರದಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ಕೇರಳ ಸರ್ಕಾರಕ್ಕೆ ತಿಳಿ ಹೇಳಬೇಕು. ಸುಪ್ರೀಂ ಕೋರ್ಟ್ ಸಹ ತನ್ನ ಮುಂದಿರುವ ಮರು ಪರಿಶೀಲನಾ ಅರ್ಜಿಯನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ ಕೆ.ಬಿ.ಶಂಕರ ನಾರಾಯಣ, ಡಾ.ಎ.ಎಚ್. ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ಅಣಬೇರು ಜೀವನಮೂರ್ತಿ, ಎಚ್.ಎಸ್.ನಾಗರಾಜ, ರಾಜನಹಳ್ಳಿ ಶಿವಕುಮಾರ ಪೈಲ್ವಾನ, ಪಿ.ಸಿ.ಶ್ರೀನಿವಾಸ, ಎನ್.ರಾಜಶೇಖರ ನಾಗಪ್ಪ, ಜೊಳ್ಳಿ ಗುರು, ಡಿ.ಕೆ. ಕುಮಾರ, ವೀರೇಶ ಪೈಲ್ವಾನ, ಗುಮ್ಮನೂರು ಶ್ರೀನಿವಾಸ, ಸತೀಶ ಪೂಜಾರಿ, ಹಾಲೇಶ ಸ್ವಾಮಿ, ರಾಜಪ್ಪ ಸ್ವಾಮಿ, ತಿಮ್ಮರಾಜ ಸ್ವಾಮಿ, ಚೌಹಾಣ್ ಸ್ವಾಮಿ, ಜಗದೀಶ ಸ್ವಾಮಿ, ಚಂದ್ರು ಸ್ವಾಮಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News