ಕೇಂದ್ರ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ: ಸಿಐಟಿಯು ರಾಜ್ಯ ಕಾರ್ಯದರ್ಶಿ ಉಮೇಶ್

Update: 2018-11-22 17:49 GMT

ಮಂಡ್ಯ, ನ.22: ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಸಿಐಟಿಯುನ ರಾಜ್ಯ ಕಾರ್ಯದರ್ಶಿ ಕೆ.ಎನ್.ಉಮೇಶ್ ಆರೋಪಿಸಿದ್ದಾರೆ.

ನಗರದ ಗಾಂಧಿಭವನದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಗುರುವಾರ ನಡೆದ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಸರಕಾರದ ನೀತಿಗಳಿಂದಾಗಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ರೈತರ ಹಾಗೂ ಕಾರ್ಮಿಕರ ಬದುಕು ಹಸನಾಗಬೇಕೆಂದರೆ ಕೇಂದ್ರ ಸರಕಾರದ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಮಿಕ ಇಲಾಖೆಯಲ್ಲಿರುವ 46 ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಬಂಡವಾಳಶಾಹಿತಗಳ ಹಿತ ಕಾಪಾಡಲು ಕೇಂದ್ರ ಸರಕಾರ ಹೊರಟಿದೆ. ಇದರಿಂದ ದೇಶದಲ್ಲಿನ ಅಸಂಖ್ಯಾತ ಕಾರ್ಮಿಕರ ಬದುಕು ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರಕಾರದ ನೀತಿಗಳು ದೇಶದಲ್ಲಿ ಕೃಷಿ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ಕನಿಷ್ಠ ಬೆಂಬಲ ಬೆಲೆ ಕೇವಲ ಆಶ್ವಾಸನೆಯಾಗಿದೆ ಉಳಿದಿದೆ. ಇದಲ್ಲದೆ ದೇಶದಲ್ಲಿ ಕೋಮುಗಲಭೆ ಹೆಚ್ಚುತ್ತಿದೆ. ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆಪಾದಿಸಿದರು.

ದೇಶದಲ್ಲಿನ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಸರಕಾರ ಹೊರಟಿದ್ದು, ಬ್ಯಾಂಕ್‍ಗಳು, ವಿಮಾ ಕಂಪನಿಗಳು, ರೈಲ್ವೆ, ರಸ್ತೆ ಸಾರಿಗೆ, ತೈಲ ಮುಂತಾದ ಸಾರ್ವಜನಿಕ ವಲಯದ ಪ್ರಮುಖ ಉದ್ಯಮಗಳಿಂದ ಬಂಡವಾಳ ಸರಕಾರ ಹಿಂತೆಗೆದುಕೊಳ್ಳುತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಅಡ್ಡ ಮಾರ್ಗ ಹಿಡಿದಿದೆ. ಸಂಸತ್‍ನಲ್ಲಿ ಒಪ್ಪಿಗೆ ಪಡೆದರೆ, ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆಯಲು ಬೆಂಬಲ ಇಲ್ಲದ ಕಾರಣ ಬಜೆಟ್‍ನಲ್ಲಿಯೇ ಸೇರಿಸಿ ಅನುಮೋದಿಸಲು ಮುಂದಾಗಿದೆ. ಇದರ ವಿರುದ್ಧ ಜನವರಿ 8 ಮತ್ತು 9ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಕರಡು ನಿರ್ಣಯ ಮಂಡಿಸಿದರು. ಜಿಲ್ಲಾಧ್ಯಕ್ಷ ಜಿ.ರಾಮಕೃಷ್ಣ, ಐಎನ್‍ಟಿಯುಸಿ ಅಧ್ಯಕ್ಷ ಡಿ.ಸುದರ್ಶನ್, ವಿಜಯಲಕ್ಷ್ಮಿ, ತನುಜಾ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News