ಪುಣೆಯಲ್ಲಿನ ಪರ್ವತೀ ಸತ್ಯಾಗ್ರಹ ಪ್ರಕರಣ

Update: 2018-11-22 18:39 GMT

ಭಾಗ-1

1929ರ ಆಗಸ್ಟ್ ತಿಂಗಳ ದಿನಾಂಕ 28ರಂದು ಲ.ಬ. ಭೋಪಟ್ಕರ್ ಅವರು ಪರ್ವತಿಯಲ್ಲಿ ದೇವಸ್ಥಾನದ ಪಂಚರಿಗೆ, ‘‘ದೇವಸ್ಥಾನದ ಆವಾರದಲ್ಲಿ ಸ್ಪಶ್ಯಾಸ್ಪಶ್ಯ ಭೇದ ಭಾವವನ್ನು ಇಂದಿನಿಂದ ತೊಡೆಯಬೇಕು, ಮತ್ತು ಎಲ್ಲ ದೇವಳಗಳು ಮತ್ತು ದೇವರನ್ನು ಎಲ್ಲರಿಗೂ ಮುಕ್ತವಾಗಿಸಿ ಅವರ ಧನ್ಯವಾದಕ್ಕೆ ಒಡೆಯರಾಗಿರಿ’’ ಎಂದು ಒಂದು ಪ್ರಕಟನಾ ಪತ್ರದ ಮೂಲಕ ವಿನಂತಿಸಿಕೊಂಡರು. ಈ ಪತ್ರವನ್ನು ಭೋಪಟ್ ಅವರು ಪುಣೆಯ ಬ್ರಾಹ್ಮಣ ವರ್ಗದವರು ನಡೆಸುವ ಅಸ್ಪಶ್ಯತಾ ನಿವಾರಣಾ ಮಂಡಳಿಯ ವತಿಯಿಂದ ಬರೆದರೆಂದು ತಿಳಿದು ಬರುತ್ತದೆ.

ಎಲ್ಲೋ, ಎಷ್ಟೋ ಅಲ್ಲದಿದ್ದರೂ, ಒಮ್ಮಿಂದೊಮ್ಮೆಲೆ ಮಡಿವಂತರ ಎದೆಗೆ ಕೈಯಿಕ್ಕುವ ಇಂತಹ ಬೇಡಿಕೆಯನ್ನು ಅಸ್ಪಶ್ಯತಾ ನಿವಾರಣಾ ಮಂಡಳಿ ಮುಂದಿಟ್ಟುದನ್ನು ಕಂಡು ನಮಗೆ ಸಖತ್ ಆಶ್ಚರ್ಯವಾಗಿದೆ. ವಿಚಾರಿಸಿದಾಗ, ಪತ್ರ ಬರೆವ ಮುನ್ನ, ಪುಣೆಯಲ್ಲಿ ರಾಜಕಾರಣದಲ್ಲಿ ಹೊಕ್ಕು ಬಳಕೆಯಿರುವ ಕೆಲ ಬ್ರಾಹ್ಮಣ ಗೃಹಸ್ಥರು, ಮಹಾರಾಷ್ಟ್ರದಲ್ಲಿನ ತಮ್ಮ ಜಾತಿಬಾಂಧವರೊಡನೆ, ಅಸ್ಪಶ್ಯತಾ ನಿವಾರಣಾ ಸಂಬಂಧವಾಗಿ ತಾವೇನು ಮಾಡಬಹುದೋ ಎಂದು ವಿಚಾರ ಮಾಡಲು, ಖಾಸಗಿಯಾಗಿ ಸಭೆ ಸೇರಿದರು ಮತ್ತು ಅವರಿವರೆಲ್ಲರೂ ತಮ್ಮ ತಮ್ಮ ಸ್ಥಳಗಳಲ್ಲಿ ದೇವಳಗಳನ್ನು ಅಸ್ಪಶ್ಯರಿಗೆ ಮುಕ್ತವಾಗಿಸುವ ನಿರ್ಧಾರಕ್ಕೆ ಬಂದರು. ಭೋಪಟ್ಕರ್ ಅವರು ಬರೆದ ಪತ್ರ, ಇದೇ ಒಪ್ಪಂದದ ಫಲಶ್ರುತಿ ಎಂದು ನಮಗನಿಸುತ್ತದೆ. ಹೇಗೇ ಇರಲಿ, ಅಸ್ಪಶ್ಯತಾ ನಿವಾರಣಾ ಮಂಡಳಿ, ಸ್ವೇಚ್ಛೆಯಿಂದ ಒಂದು ಘನಕಾರ್ಯವನ್ನು ತಿಳಿದೇ ಕೈಗೆತ್ತಿಕೊಂಡಿದೆ, ಎಂಬುದು ನಿರ್ವಿವಾದ ಮತ್ತು ಅದರ ಫಲಪ್ರಾಪ್ತಿಯೆಡೆಗೆ ಎಲ್ಲರ ದೃಷಿಯೂ ಸಹಜವಾಗಿ ನೆಟ್ಟಿದೆ. ಸಾಕಷ್ಟು ಕಾಲ ಸಂದರೂ, ಪರ್ವತಿಯ ಪಂಚರು ಇದಕ್ಕೆ ಉತ್ತರವನ್ನು ನೀಡದೆ, ಮುಗ್ಧತೆಯನ್ನು ತೋರಿದ್ದಾರೆ.

ಪಂಚರಿಂದ ಯಾವ ಉತ್ತರವೂ ಬರುವಂತಿಲ್ಲವೆಂಬುದನ್ನು ಕಂಡು, ಪುಣೆಯ ಅಸ್ಪಶ್ಯ ವರ್ಗವೇ, ತಮಗಾಗಿ ಪರ್ವತಿಯ ದೇವಳವು ತೆರೆದಿರಲಿ ಎಂದು ಪ್ರತ್ಯಕ್ಷ ಬೇಡಿಕೆಯಿಟ್ಟಿದೆ. ಆ ವಿನಂತಿಗೆ ಒತ್ತು ಸಿಗಲೆಂದು, ಪುಣೆಯ ಯುವಕ ಸಂಘವು ವಿನಂತಿ ವಜಾಪತ್ರ ಬರೆದಿದೆ. ಆದರೂ ಪಂಚರಿಂದ ಮಾತೇ ಹೊರಟಿಲ್ಲ. ಈ ಮುಗ್ಧತೆಯ ಅರ್ಥ, ಪಂಚರು ಈ ಬೇಡಿಕೆಗೆ ಒಪ್ಪುವವರಲ್ಲ, ಎಂದರಿತು, ಪುಣೆಯ ಅಸ್ಪಶ್ಯ ವರ್ಗದ ಧುರೀಣರು ಸತ್ಯಾಗ್ರಹ ಆರಂಭಿಸುವುದಾಗಿ ಪ್ರಕಟಿಸಿದ್ದಾರೆ. ಆದರೂ ಬಾಯ್ಬಿಡದ ಪಂಚರು, ಕೊನೆಗೆ ದಿನಾಂಕ 2-10-29ರಂದು ಅಸ್ಪಶ್ಯ ವರ್ಗದ ವತಿಯಿಂದ ಮೂರು ದಿನಗಳೊಳಗೆ ಸ್ಪಷ್ಟ ಉತ್ತರ ನೀಡುವಂತೆ ನೋಟಿಸ್ ಕೊಡಲಾಯ್ತು. ಹೀಗೆ ನೋಟಿಸ್ ಹೊರಟಾಗ ಸುಮ್ಮನಿರುವುದು ಶಕ್ಯವಾಗದೆ, ಪಂಚರು, ಅಕ್ಟೋಬರ್ ದಿನಾಂಕ 8ರ ‘ಕೇಸರಿ’ಯಲ್ಲಿ ತಮ್ಮ ಉತ್ತರವನ್ನು ಪ್ರಕಟಿಸಿದರು. ಅದರಲ್ಲಿ, ‘‘ಸದರಿ ದೇವಸ್ಥಾನವು ಪಂಚ ಕಮಿಟಿಯ ಖಾಸಗಿ ಮಾಲಕತ್ವದ್ದಾಗಿದೆ. ಯಾವ ಶ್ರೀಮಂತ ಬಾಳಾಜಿ ಬಾಜೀರಾವ್ ಉರ್ಫ್ ನಾನಾಸಾಹೇಬ್ ಪೇಶ್ವೆ ಇದನ್ನು ಕಟ್ಟಿದ್ದರೋ, ಅವರು ತಮ್ಮ ಖಾಸಗಿ ಖರ್ಚಿನಿಂದ ಕಟ್ಟಿಸಿದರು, ಮತ್ತು ಅದರಲ್ಲಿ ಅಸ್ಪಶ್ಯ ವರ್ಗಕ್ಕೆ, ಅವರು ಹಿಂದೂಧರ್ಮೀಯರೇ ಇದ್ದರೂ, ಇತರ ಉಚ್ಚವರ್ಣಿಯ ಹಿಂದೂಗಳು ಹೋಗುವಲ್ಲಿಗೆ ಪ್ರವೇಶವಿಲ್ಲ ಮತ್ತು ಈ ವರೆಗೆ ಅಂತಹ ವಹಿವಾಟಿಲ್ಲ; ಮತ್ತು ಸದರಿ ದೇವಸ್ಥಾನದ ವ್ಯವಸ್ಥೆ ಪಂಚ ಕಮಿಟಿಯಲ್ಲಿ ಟ್ರಸ್ಟೀ ಇಲ್ಲವೇ ಬಂಧುಗಳದ್ದಾಗಿರುವುದರಿಂದ ಮೂಲ ಸಂಸ್ಥಾಪಕರ ಕಾರಣದಿಂದ ಹೊರಗೆ ಏನೇ ಮಾಡಲೂ ಯಾವುದೇ ಪಂಚರಿಗೆ ಖಂಡಿತಾ ಅಧಿಕಾರವಿಲ್ಲ’’ ಹೀಗೆ ಈ ಕಾರಣದಿಂದ ಈ ಬೇಡಿಕೆಯನ್ನು ಮಾನ್ಯ ಮಾಡುವುದು ಅಸಾಧ್ಯ, ಎಂದು ಹೇಳಿದ್ದಾರೆ. ಈ ಉತ್ತರ ಹೊರಬಂದ ಮೇಲೆ ಅಸ್ಪಶ್ಯ ವರ್ಗವು ಸತ್ಯಾಗ್ರಹದ ಉಪಾಯವನ್ನು ಜಾರಿಗೆ ತರುವುದು ಸಾಧ್ಯವಾಯಿತು ಮತ್ತು ಆ ರೀತಿ ಕಳೆದ ತಿಂಗಳು ದಿನಾಂಕ ಹದಿಮೂರರಂದು ಪರ್ವತಿಯಲ್ಲಿ ಸತ್ಯಾಗ್ರಹ ಹೂಡಲಾಯಿತು.

ಪುಣೆಯ ಕರ್ಮಮಠರ ಗೂಂಡಾಗಿರಿ

ಈ ಸತ್ಯಾಗ್ರಹದಲ್ಲಿ ವಿರುದ್ಧ ಪಕ್ಷದ ವತಿಯಿಂದ ಏನೇನೆಲ್ಲ ನಡೆಯಿತು ಎಂಬುದನ್ನು ನೋಡಿದರೆ, ಪುಣೆಯೆಂಬುದು ಒಂದು ದುಷ್ಕರ್ಮಿಗಳ ಅಡ್ಡೆಯೆಂದೇ ಹೇಳಬೇಕು. ಪುಣೆಯ ಸತ್ಯಾಗ್ರಹದಲ್ಲಿ ನೂರು, ನೂರೈವತ್ತು ಜನರಿದ್ದರು. ಅಷ್ಟು ಸಂಖ್ಯಾ ಬಲದ ಮೇಲೆ ಇಷ್ಟು ದೊಡ್ಡ ಕಾರ್ಯವನ್ನು ಹೊರಿಸುವ ಸಾಹಸ ಮಾಡುವ ಪುಣೆಯ ಅಸ್ಪಶ್ಯ ಜನರ ಮೇಲೆ ಕೈ ಮಾಡುವ ಬದಲು, ಆ ಬಗ್ಗೆ ಕೌತುಕ ಪಡುವುದೇ ಯೋಗ್ಯವಿತ್ತು. ಹಾಗಲ್ಲದೆ ಈ ಸತ್ಯಾಗ್ರಹ ತುಂಬ ಶಾಂತಿಯಿಂದ ನಡೆಯುವುದೆಂದು ಮೊದಲೇ ಸಾರಲಾಗಿತ್ತು. ಸತ್ಯಾಗ್ರಹಕ್ಕೆ ಬರುವವರು ಕೈಯಲ್ಲಿ ಬಡಿಗೆ, ಕೊಡೆ ತರಬಾರದೆಂದು ಸಾರಿದ್ದನ್ನು ಅಕ್ಷರಶಃ ಪಾಲಿಸಲಾಗಿತ್ತು. ಹೀಗೆ ನೂರು, ನೂರೈವತ್ತು ಸತ್ಯಾಗ್ರಹಿಗಳ ಹೆಸರು ಕೆಡಿಸಲು ಐದಾರು ಸಾವಿರ ಅಸ್ಪಶ್ಯರನ್ನು ಒಗ್ಗೂಡಿಸಿ, ಸತ್ಯಾಗ್ರಹಿಗಳನ್ನು ಕಲ್ಲು, ದೊಣ್ಣೆ,ಚಪ್ಪಲಿಯ ಮಳೆಗೆರದು, ಪ್ರತೀಕಾರ ಮಾಡದಿರುವ ನಿರ್ಧಾರವನ್ನು ಮೊದಲೇ ಪ್ರಕಟಿಸಿದ ಬಡ ಸತ್ಯಾಗ್ರಹಿಗಳನ್ನು ಈ ಪರಿ ಆಘಾತಿಸಿದ ಅಸುರೀ ಪ್ರವೃತ್ತಿ ಬೇರೆಲ್ಲಿ ಕಂಡುಬಂದೀತು? ಈ ರೀತಿ ಹಲ್ಲೆ ಮಾಡುವ ಜನರಿಗೆ ನಾವು ಹೇಳುವುದೇನೆಂದರೆ, ಅಸ್ಪಶ್ಯರ ಸತ್ಯಾಗ್ರಹದ ವಿಷಯದಲ್ಲಿ ಸಶಸ್ತ್ರ ಪ್ರತೀಕಾರಕ್ಕೆಳಸುವವರು ಅಸ್ಪಶ್ಯರ ಸತ್ಯಾಗ್ರಹದ ರೂಪಾಂತರಕ್ಕೂ ಕಾರಣರಾಗುತ್ತಾರೆ. ಅಸ್ಪಶ್ಯರ ಇಂದಿನ ಸತ್ಯಾಗ್ರಹ ಶಸ್ತ್ರಸನ್ಯಾಸಯುಕ್ತವಾದುದು; ಆದರೆ ಅವರ ವಿರೋಧಿಗಳು ಪ್ರತೀಕಾರ ಧೋರಣೆ ತಳೆದರೆ, ಸತ್ಯಾಗ್ರಹಿಗಳೂ ತಮ್ಮ ಹಕ್ಕು ಸ್ಥಾಪಿಸಲು ಕಲ್ಲು, ದೊಣ್ಣೆ ಕೈಗೆತ್ತಿಕೊಳ್ಳಬೇಕಾಗಿ ಬರುವುದು, ಪ್ರತೀಕಾರವನ್ನು ಅವಲಂಬಿಸದಿರುವರ ಉದಾತ್ತ ವರ್ತನೆಯನ್ನು ದೌರ್ಬಲ್ಯವೆಂದುಕೊಂಡು ಪ್ರತಿಪಕ್ಷದವರು ದೌರ್ಜನ್ಯ ತೋರಲು ಹೆಚ್ಚು ಪ್ರವೃತ್ತರಾಗುವರು ಎಂಬುದನ್ನೂ ಅವರು ಮರೆತಿಲ್ಲ. ತಮ್ಮ ಹಲ್ಲೆಯಿಂದ ಜರ್ಝರಿತರಾಗಿ ಬಹಿಷ್ಕೃತ ವರ್ಗದ ಜನರು ಮಂದಿರ ಪ್ರವೇಶ ಬೇಡಿಕೆಯನ್ನು ಬಿಟ್ಟುಕೊಡುವರು ಎಂಬ ನಂಬಿಕೆಯನ್ನು ಆ ಧರ್ಮಾಂಧರಲ್ಲಿ ಈ ಸೈತಾನಿ ನಾಯಕರು ಹುಟ್ಟಿಸಿದ್ದಾರೆ. ಹಾಗೆಂದೇ ಯಾವುದಾದರೂ ಉಪಾಯದಿಂದ ಅಸ್ಪಶ್ಯರನ್ನು ಬಂಧಿಗಳಾಗಿಸಬೇಕು, ಎಂಬ ಕರಪತ್ರಿಕೆಗಳನ್ನು ಪುಣೆಯಲ್ಲಿ ಹಂಚಲಾಗಿದೆ. ಆದರೆ ಆ ರೀತಿ ಅತಿಕ್ರಮಣ ಮಾಡಿ ಅಸ್ಪಶ್ಯರ ಸತ್ಯಾಗ್ರಹ ನಡೆಯದಂತೆ ಮಾಡುವ ಜನರಿಗೆ ನಮ್ಮ ಸೂಚನೆಯೆಂದರೆ ಭಕ್ತಿಭಾವ ಮತ್ತು ಆತ್ಮೀಯತೆಯಿಂದ ದೇವ ದರ್ಶನಕ್ಕೆ ಬರುವ ಈ ಜನರು, ಘಜನೀ ಮುಹಮ್ಮದ್‌ನಂತೆ ಮೂರ್ತಿ ಭಂಜಕರಾಗದಿದ್ದರೆ ಸಾಕು.

ನೀರಿನ ಓಘವನ್ನು ತಿರುಗಿಸಬಹುದು, ಆದರೆ ತಡೆಯಲಾಗದು. ಅಣೆಕಟ್ಟು ಕಟ್ಟಿ ಹಿಡಿದಿಡಲೆತ್ನಿಸಿದರೆ ಕಟ್ಟೆ ಒಡೆಯುವುದು. ಅಜ್ಞ ಸಮಾಜದಲ್ಲಿ ಗೂಂಡಾ ಶಕ್ತಿಯ ಮೇಲೆ ಕುಣಿದು, ಅಸ್ಪಶ್ಯರನ್ನು ಹಣಿಸಿ ಅವರ ತೇಜೋವಧೆ ಮಾಡುವ ಈ ಮಹಾಮೂರ್ಖರು, ಯಾವುದೇ ಶಕ್ತಿಯನ್ನು ರಾಕ್ಷಸೀಯವಾಗಿ ಇತರರ ಮೇಲೆ ಪ್ರಯೋಗಿಸಿದರೆ ಸ್ವನಾಶದ ಸಾಧ್ಯತೆಯೇ ಅಧಿಕವೆನ್ನುವುದನ್ನು ಅರಿಯಬೇಕು.

ಅಸ್ಪಶ್ಯರ ಕಪಟ ಕೈವಾರ

ಜೀರ್ಣಮತವಾದಿಗಳು ಹುಟ್ಟು ಹಾಕಿದ ಈ ಗೊಂದಲ ಮತ್ತು ಅವರು ಮಾಡಿದ ಹಿಂದೂ ಧರ್ಮದ ವಿಡಂಬನೆ ಅರ್ಥೈಸಿಕೊಳ್ಳುವಂತಹುದಾಗಿದೆ, ಆದರೆ ಈ ಸತ್ಯಾಗ್ರಹ ಪ್ರಕರಣಗಳಲ್ಲಿ ಅರ್ಥೈಯಿಸಿಕೊಳ್ಳಲಾಗದ ವೈಚಿತ್ರಪೂರ್ಣ ವಿಷಯ, ಪುಣೆಯ ನವಮತವಾದಿಗಳ ವರ್ತನೆ. ಪುಣೆಯಲ್ಲಿ ನವಮತವಾದಿಗಳ ಎರಡು ಪಕ್ಷಗಳಿವೆ. ಒಂದು, ಸಮಾಜಕಾರಣಕ್ಕಾಗಿ ಅಸ್ಪಶ್ಯತಾ ನಿವಾರಕ ಮಂಡಳಿಯಂಥ ಅಸ್ಪಶ್ಯರ ಪುರಸ್ಕರ್ತರೆಂಬವರು; ಮತ್ತೊಂದು, ರಾಜಕಾರಣಕ್ಕಾಗಿ ಅಸ್ಪಶ್ಯರ ಬಗ್ಗೆ ಸಹಾನುಭೂತಿ ತೋರುವ ಕೇಳ್ಕರ್‌ರಂತಹ ರಾಜಕೀಯ ನಾಯಕರು. ಈ ಜನರು ಸ್ವತಃ ಸತ್ಯಾಗ್ರಹ ಮಾಡುವ ತಯಾರಿ ಇರಲಿಲ್ಲವೆಂದು ಸಾರಿದ್ದಾರೆ. ಹಾಗಿದ್ದೂ, ಆ ಸತ್ಯಾಗ್ರಹಿಗಳ ಮೇಲಾದ ಹಲ್ಲೆ ತಮಗೆ ಮಾನ್ಯವಲ್ಲ, ಎಂದು ಸಹಾನುಭೂತಿ ನಟಿಸಿದ್ದಾರೆ. ಅವರ ಈ ಕಳಕಳಿ ತೋರಿಕೆಯದ್ದಲ್ಲವಾದರೆ, ಆ ಅನರ್ಥವನ್ನು ತಡೆಯಲು ಅವರು ಮಾಡಿದ್ದೇನೆಂದು ನಾವು ಕೇಳ ಬಯಸುತ್ತೇವೆ. ಅಸ್ಪಶ್ಯ ಸತ್ಯಾಗ್ರಹಿಗಳನ್ನು ವಿರೋಧಿಸಲು, ಅಲ್ಲಿ ದೇಹದಂಡನೆಯ ಸಮಾವೇಶ ಆಗದಂತೆ ತಾವು ಮಾಡಿದ್ದೇನು? ಅಲ್ಲಿ ಹಿಂಸಾಚಾರ ಮಾಡದೆ ವಿರೋಧಿಸಲು ಆಗುತ್ತಿರಲಿಲ್ಲವೇನು? ಹಲ್ಲೆಯಾದುದಲ್ಲವಾದರೆ ಅಲ್ಲಿ ನಿಷ್ಠೆಯಿಂದಲೇ ಎದುರಿಸಲಾಗುತ್ತಿತ್ತು. ಹಿಂದೂ ಸಮಾಜದ ನಾಯಕರು, ಅಸ್ಪಶ್ಯರ ಸತ್ಯಾಗ್ರಹ ನಡೆಯದಂತೆ ಅಡ್ಡಿಯೊಡ್ಡಿದರು. ಮೇಲಿನೆರಡು ಪಕ್ಷಗಳಲ್ಲಿ ಮೊದಲನೆಯದು, ಅಂದರೆ, ಪರ್ವತೀ ದೇವಳ ಪ್ರವೇಶಕ್ಕೆ ಸೂತ ಉವಾಚ ಮಾಡುವ ಪಕ್ಷಕ್ಕೆ ವಿಶೇಷ ಜವಾಬ್ದಾರಿಯೆಂದು ಯಾರೂ ಹೇಳಬಹುದು. ಆದರೆ, ಆಶ್ಚರ್ಯದ ವಿಷಯವೆಂದರೆ, ಪರ್ವತೀ ಪಂಚರು ತಮ್ಮ ತೀರ್ಪು ಇತ್ತ ದಿನವೇ ಅಸ್ಪಶ್ಯತಾ ನಿವಾರಕ ಮಂಡಳಿಯೂ ತಮಗೆ ಸತ್ಯಾಗ್ರಹ ಚಳವಳಿ ಜೊತೆ ಯಾವ ಸಂಬಂಧ ಇಲ್ಲವೆಂದು ಸಾರಿತು. ತಾವದನ್ನು ಆರಂಭಿಸಿಯೂ ಇಲ್ಲ, ಅದಕ್ಕೆ ಪ್ರೋತ್ಸಾಹ ಕೊಟ್ಟೂ ಇಲ್ಲ, ಹೀಗೆ ಆ ಜವಾಬ್ದಾರಿಯಿಂದ ಕಳಚಿಕೊಂಡ ನಂತರ, ಅವರ ಜವಾಬ್ದಾರಿ ಸ್ಥಳೀಯ ಅಸ್ಪಶ್ಯ ವರ್ಗದ ಮೇಲೆ ಸಹಜವಾಗಿ ಬಂದುಬಿಟ್ಟಿತು.

ಒಮ್ಮತದ ಪಂಚರು ಮತ್ತು ಢೋಂಗಿ ಕೈವಾರಿಯರು

ಪರ್ವತೀ ಪಂಚರ ವಿವರಣೆ ಮತ್ತು ಅಸ್ಪಶ್ಯತಾ ನಿವಾರಕ ಮಂಡಳಿಯ ವಿವರಣೆ ಈ ಎರಡೂ ವಿವರಣೆಗಳು ಒಂದೇ ದಿನ ಪ್ರಸಾರವಾದುದು ಮೂಲದಲ್ಲೇ ವಿಚಿತ್ರವಾಗಿ ಕಾಣಿಸುತ್ತದೆ. ಪಂಚರು ಮತ್ತು ಅಸ್ಪಶ್ಯತಾ ನಿವಾರಕ ಮಂಡಳಿ, ಎರಡೂ ಮುನ್ನಾದಿನ ವಿಚಾರ ವಿನಿಮಯ ಮಾಡಿ, ಅಸ್ಪಶ್ಯತಾ ನಿವಾರಕ ಮಂಡಳಿಯ ಮನೋನಿರ್ಧಾರ ತೆಗೆದುಕೊಂಡ ಬಳಿಕವೇ ಪಂಚರು ನಕಾರಾರ್ಥಿ ಉತ್ತರ ಕೊಟ್ಟರೆಂದು ಹೇಳಿದರೆ. ತಾರ್ಕಿಕ ದೃಷ್ಟಿಯಿಂದ ಅದು ಅಯುಕ್ತವೆಂದು ನಮಗೆ ಅನ್ನಿಸುವುದಿಲ್ಲ. ಹಾಗಲ್ಲದಿದ್ದರೆ ಪುಣೆಯಲ್ಲಿ ಅಸ್ಪಶ್ಯರು ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ ದಿನವೇ ಈ ಸತ್ಯಾಗ್ರಹಕ್ಕೆ ಸಮ್ಮತಿ ಇಲ್ಲವೆಂದೂ, ಯಾವ ತರದ ಬೆಂಬಲವನ್ನೂ ತಾವು ನೀಡುವವರಲ್ಲವೆಂದೂ ಅಸ್ಪಶ್ಯತಾ ನಿವಾರಕ ಮಂಡಳಿ ಮೊದಲೇ ಸಾರಲಿಲ್ಲವೇಕೇ? ಹಾಗೆ ಮಾಡಿದಿದ್ದರೆ ಟ್ರಸ್ಟಿಗಳ ಜೊತೆ ಸೇರಿ ಅಸ್ಪಶ್ಯರಿಗೆ ವಿಶ್ವಾಸಾಘಾತ ಮಾಡಿದ ಆರೋಪ ಹೊರಲು, ಅಸ್ಪಶ್ಯ ವಸ್ತುಸ್ಥಿತಿಯಲ್ಲಿ ಯಾವ ಕಾರಣವೂ ಇರುತ್ತಿರಲಿಲ್ಲ. ಅಸ್ಪಶ್ಯರ ಹೊರತು, ಅಸ್ಪಶ್ಯತಾ ನಿವಾರಕ ಮಂಡಳಿ ಎಷ್ಟರ ವರೆಗೆ ತಮಗೆ ಸಹಾಯ ಮಾಡಲು ಸಿದ್ಧವಿದೆ ಎಂಬುದು ತಿಳಿಯದೆ ಈ ಪ್ರಸಂಗವು ಯಾರ ಮೇಲೆ ಅವಲಂಬಿತವಾಗಿರುತ್ತದೆ ಎಂಬುದರ ಅಂದಾಜೂ ಇಲ್ಲ. ಹಾಗಾಗದಿರುವುದರಲ್ಲಿ ಅಸ್ಪಶ್ಯತಾ ನಿವಾರಕ ಮಂಡಳಿಯ ಕುಟಿಲ ಹಸ್ತವಿದೆ ಎಂದು ಎದೆಗಾರಿಕೆಯಿಂದಲೇ ಹೇಳಬೇಕು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News