ಬಿಪಿಎಲ್ ಕುಟುಂಬಗಳಿಗೆ ಮಾತ್ರ ಉಚಿತ ಅಕ್ಕಿ ವಿತರಣೆಗೆ ಹೈಕೋರ್ಟ್ ಒಲವು

Update: 2018-11-23 17:23 GMT

ಚೆನ್ನೈ,ನ.23: ಎಲ್ಲ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಣೆಯನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಅಭಿಪ್ರಾಯಿಸಿರುವ ಮದ್ರಾಸ್ ಉಚ್ಚ ನ್ಯಾಯಾಲಯವು,ಸಮಾಜದ ಎಲ್ಲ ವರ್ಗಗಳಿಗೆ ಉಚಿತ ಕೊಡುಗೆಗಳಿಂದಾಗಿ ಜನರು ಸೋಮಾರಿಗಳಾಗಿದ್ದಾರೆ ಎಂದು ಬೆಟ್ಟು ಮಾಡಿದೆ.

ಅಗತ್ಯವುಳ್ಳವರಿಗೆ ಮತ್ತು ಬಡವರಿಗೆ ಅಕ್ಕಿ ಹಾಗೂ ಇತರ ದಿನಸಿಗಳಂತಹ ಮೂಲ ಅಗತ್ಯಗಳನ್ನು ಒದಗಿಸುವುದು ಸರಕಾರದ ಬಾಧ್ಯತೆಯಾಗಿದೆ. ಆದರೆ ಸರಕಾರಗಳು ರಾಜಕೀಯ ಲಾಭ ಗಳಿಕೆಗಾಗಿ ಸ್ಥಿತಿವಂತರು ಸೇರಿದಂತೆ ಎಲ್ಲ ವರ್ಗಗಳಿಗೂ ಇಂತಹ ಲಾಭಗಳನ್ನು ನೀಡಿವೆ. ಇದರ ಪರಿಣಾಮವಾಗಿ ಜನರು ಎಲ್ಲವನ್ನೂ ಸರಕಾರದಿಂದ ಉಚಿತವಾಗಿ ನಿರೀಕ್ಷಿಸಲು ಆರಭಿಸಿದ್ದಾರೆ. ಹೀಗಾಗಿ ಅವರು ಸೋಮಾರಿಗಳಾಗಿದ್ದು, ಸಣ್ಣಪುಟ್ಟ ಕೆಲಸಗಳಿಗೂ ವಲಸೆ ಕಾರ್ಮಿಕರ ಮೊರೆ ಹೋಗುವಂತಾಗಿದೆ ಎಂದು ನ್ಯಾಯಮೂರ್ತಿಗಳಾದ ಎನ್.ಕೃಪಾಕರನ್ ಮತ್ತು ಅಬ್ದುಲ್ ಖುದ್ದೂಸ್ ಅವರ ಪೀಠವು ಹೇಳಿತು.

ಗುರುವಾರ ಪಡಿತರ ಅಕ್ಕಿ ಕಳ್ಳಸಾಗಾಣಿಕೆ ಮತ್ತು ಮಾರಾಟದ ಆರೋಪದಲ್ಲಿ ವ್ಯಕ್ತಿಯೋರ್ವನ್ನು ಗೂಂಡಾ ಕಾಯ್ದೆಯಡಿ ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಲಯವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಉಚಿತ ಅಕ್ಕಿ ವಿತರಣೆಯನ್ನು ಬಿಪಿಎಲ್ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲು ಇದು ಸಕಾಲವಾಗಿದೆ ಎಂದು ಹೇಳಿದ ನ್ಯಾಯಾಲಯವು, ಇತರರಿಗೆ ಈ ಸೌಲಭ್ಯವನ್ನು ಹಿಂದೆಗೆದುಕೊಳ್ಳಲು ಪಡಿತರ ವಿತರಣೆ ಯೋಜನೆಗೆ ತಿದ್ದುಪಡಿ ತರಬಹುದೇ ಎಂಬ ಬಗ್ಗೆ ಸರಕಾರದಿಂದ ಸೂಚನೆಗಳನ್ನು ಪಡೆದುಕೊಳ್ಳುವಂತೆ ಅಡ್ವೊಕೇಟ್ ಜನರಲ್ ವಿಜಯ ನಾರಾಯಣ ಅವರಿಗೆ ನಿರ್ದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News