‘ನನಗೆ ಹಿಂದಿ ಗೊತ್ತು’ ಎಂದು ಪತ್ರಕರ್ತನಿಗೆ ತಿಳಿಸಿದ ನಿರ್ಮಲಾ ಸೀತಾರಾಮನ್

Update: 2018-11-24 15:36 GMT

ಭೋಪಾಲ, ನ.24: 2016ರಲ್ಲಿ ಭಾರತೀಯ ಸೇನೆಯು ನಡೆಸಿದ್ದ ಸರ್ಜಿಕಲ್ ದಾಳಿಗಳ ಕುರಿತಂತೆ ವರದಿಗಾರನ ಪ್ರಶ್ನೆಯಲ್ಲಿನ ವ್ಯಂಗ್ಯಾತ್ಮಕ ಧ್ವನಿಯನ್ನು ಆಕ್ಷೇಪಿಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ನನಗೆ ಹಿಂದಿ ಬರುತ್ತದೆ’ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ವರದಿಗಾರನೋರ್ವ,ಸರ್ಜಿಕಲ್ ದಾಳಿಗಳು ನಡೆದು ಎರಡು ವರ್ಷಗಳಾಗಿದ್ದರೂ ಎನ್‌ಡಿಎ ಸರಕಾರವೇಕೆ ಈಗ ಅದನ್ನು ಕೊಚ್ಚಿಕೊಳ್ಳುತ್ತಿದೆ ಎಂದು ಅವರನ್ನು ಪ್ರಶ್ನಿಸಿದ್ದ.

ಇದರಿಂದ ಅಸಮಧಾನಗೊಂಡ ಸೀತಾರಾಮನ್,‘‘ನೀವು ಅತ್ಯಂತ ವ್ಯಂಗ್ಯಾತ್ಮಕ ಧ್ವನಿಯಲ್ಲಿ ಪ್ರಶ್ನೆ ಕೇಳಿದ ರೀತಿಯು ನನಗೆ ನೋವನ್ನುಂಟು ಮಾಡಿದೆ. ನೀವು ‘ಬಿನ್ ಬಜಾಯೆ(ಟಾಂ ಟಾಂ ಮಾಡುವುದು)’ ಶಬ್ಧವನ್ನು ಬಳಸಿದ್ದೀರಿ. ನನಗೆ ಹಿಂದಿ ಗೊತ್ತು’’ ಎಂದು ಹೇಳಿದರು.

ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ಪ್ರಚಾರಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಪಕ್ಷದ ಹಲವಾರು ನಾಯಕರು ಸರ್ಜಿಕಲ್ ದಾಳಿಗಳನ್ನು ಪದೇಪದೇ ಪ್ರಸ್ತಾಪಿಸುತ್ತಿದ್ದಾರೆ.

ಸರ್ಜಿಕಲ್ ದಾಳಿಗಳ ಬಗ್ಗೆ ಪದೇಪದೇ ಹೇಳಿಕೊಳ್ಳುವುದು ಅಪೇಕ್ಷಣೀಯವೇ,ಅದು ಸೈನಿಕರ ಹಿತಾಸಕ್ತಿಗಳಿಗೆ ಪೂರಕವಾಗಿದೆಯೇ ಮತ್ತು ಕಾಂಗ್ರೆಸ್ ಸರಕಾರವು ಇಂತಹ ದಾಳಿಗಳನ್ನೆಂದಿಗೂ ನಡೆಸಿರಲಿಲ್ಲವೇ ಎಂದು ವರದಿಗಾರ ಪ್ರಶ್ನಿಸಿದ್ದ.

“ಪ್ರತಿಯೊಬ್ಬ ಪ್ರಜೆಯೂ ಅದನ್ನು(ಸರ್ಜಿಕಲ್ ದಾಳಿ) ವೈಭವೀಕರಿಸಬೇಕು. ಶತ್ರುವಿನ ಮೇಲೆ ದಾಳಿ ನಡೆಸಿದ್ದಕ್ಕೆ ನಾವು ನಾಚಿಕೊಳ್ಳಬೇಕೇ? ಅವರು ಭಯೋತ್ಪಾದಕರ ನೆರವಿನಿಂದ ನಮ್ಮ ಯೋಧರ ಮೇಲೆ ದಾಳಿ ಮಾಡಿದ್ದರು. ನಾವು ಅವರ(ಭಯೋತ್ಪಾದಕರ) ಶಿಬಿರಗಳನ್ನು ಗುರಿಯಾಗಿಸಿಕೊಂಡಿದ್ದೆವು” ಎಂದ ಸೀತಾರಾಮನ್, “ನಮ್ಮ ತಾಯ್ನಾಡಿಗಾಗಿ ಜೀವಗಳನ್ನು ತ್ಯಾಗ ಮಾಡಿದ ಯೋಧರ ಬಗ್ಗೆ ನಮಗೆ ಹೆಮ್ಮೆಯಿರಬೇಕು” ಎಂದರು.

ಕಾಂಗ್ರೆಸ್ ಸರಕಾರವು ಹಿಂದೆ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದರೆ ಅದು ದೇಶಕ್ಕೆ ಹೆಮ್ಮೆಯ ವಿಷಯವಾಗಿರುವುದರಿಂದ ಪಕ್ಷವು ಅದನ್ನು ವೈಭವೀಕರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News