ಇನ್ನೂ ಮೂರು ದಿನ ಮೋಡ ಕವಿದ ವಾತಾವರಣ
ಬೆಂಗಳೂರು, ನ.24: ರಾಜ್ಯದ ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರು-ನಾಲ್ಕು ದಿನ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಕೆಲ ಪ್ರದೇಶಗಳಲ್ಲಿ ಚಳಿಗಾಳಿ ಸಹಿತ ತುಂತುರು ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಹಿಂಗಾರು ಚುರುಕಾಗಿತ್ತು. ಆದರೆ ಶುಕ್ರವಾರ-ಶನಿವಾರದ ವೇಳೆಗೆ ಇದು ದುರ್ಬಲವಾಗಿದ್ದು, ತಮಿಳುನಾಡು ಹಾಗೂ ಪುದುಚೇರಿಯಲ್ಲೂ ಮಳೆಯಬ್ಬರ ಇಳಿಕೆಯಾಗಿದೆ. ವಾಯುಭಾರ ಕುಸಿತ ಅರಬ್ಬಿಸಮುದ್ರದ ಆಗ್ನೇಯ ಭಾಗಕ್ಕೆ ಚಲಿಸಿದ್ದು, ಮುಂದಿನ 24 ಗಂಟೆಗಳಲ್ಲಿ ಮಳೆ ಪ್ರಮಾಣ ಕ್ರಮೇಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.
ಕರಾವಳಿ ಪ್ರದೇಶ, ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಕಳೆದೆರಡು ದಿನದಿಂದ ಜಿಟಿಜಿಟಿ ಮಳೆಯಾಗುತ್ತಿದೆ. ಹಿಂಗಾರಿನಲ್ಲಿ ತೀವ್ರ ಮಳೆ ಕೊರತೆ ಎದುರಿಸುತ್ತಿರುವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ಅಲ್ಲಲ್ಲಿ ಮಳೆಯಾಗಿದ್ದು, ನಗರದ ಕೇಂದ್ರ ಭಾಗದಲ್ಲಿ ಅಂದಾಜು 3.8 ಮಿ.ಮಿ., ಕೆಂಪೇಗೌಡ ಅಂತರ್‌ರಾಷ್ಟ್ರಿಯ ವಿಮಾನನಿಲ್ದಾಣ ಪ್ರದೇಶದಲ್ಲಿ 2.2 ಮಿ.ಮಿ. ಹಾಗೂ ಎಚ್‌ಎಎಲ್ ವಿಮಾನ ನಿಲ್ದಾಣ ಪ್ರದೇಶದಲ್ಲಿ 7.6 ಮಿ.ಮಿ. ಮಳೆಯಾಗಿದೆ.
ಕುಸಿದ ತಾಪಮಾನ: ಮೋಡ ಕವಿದ ವಾತಾವರಣದಿಂದ ಗರಿಷ್ಠ ತಾಪಮಾನವೂ ಕುಸಿದಿದ್ದು, 25 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅ.1ರಿಂದ ನ.23ರವರೆಗೆ ನಗರದಲ್ಲಿ ವಾಡಿಕೆಯಂತೆ 205.9 ಮಿ.ಮಿ. ಮಳೆಯಾಗಬೇಕು. ಆದರೆ ಕೇವಲ 89.7 ಮಿ.ಮಿ. ಮಳೆಯಾಗಿ್ದು, ಶೇ.56 ಮಳೆ ಕೊರತೆಯಾಗಿದೆ.