ಮತದಾರರ ಪಟ್ಟಿಯಲ್ಲಿ ಪ್ರತೀ ಅರ್ಹ ಮತದಾರರ ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು: ಶಾಲಿನಿ ರಜನೀಶ್

Update: 2018-11-24 17:36 GMT

ಶಿವಮೊಗ್ಗ, ನ. 24: ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮತದಾರರ ಪಟ್ಟಿ ಪರಿಷ್ಕರಣೆ ವೀಕ್ಷಕರಾಗಿ ಆಗಮಿಸಿದ ಶಾಲಿನಿ ರಜನೀಶ್ ಅವರು ಸೂಚನೆ ನೀಡಿದರು. ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಗತಿ ಪರಿಶೀಲನೆ ನಡೆಸಿದರು. 

ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಅತ್ಯಂತ ಮಹತ್ವದ್ದು. 18 ವರ್ಷ ತುಂಬಿರುವ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಖಾತ್ರಿಪಡಿಸಬೇಕು. ಯುವ ಮತದಾರರು ಮಾತ್ರವಲ್ಲದೆ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಕೊಳಗೇರಿ ನಿವಾಸಿಗಳು, ಪರಿಶಿಷ್ಟ ಜಾತಿ ಪಂಗಡಗಳ, ದುರ್ಬಲ ವರ್ಗಗಳ ಜನರು ಹಾಗೂ ಮಹಿಳೆಯರು ಶೇ.100ರಷ್ಟು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ 46 ಕೊಳಗೇರಿಗಳಿದ್ದು, ಅಂತಹ ಕಡೆಗಳಲ್ಲಿ ವಿಶೇಷ ಅಭಿಯಾನ ನಡೆಸಬೇಕು. ಹಾಗೂ 28ಮತಗಟ್ಟೆಗಳನ್ನು ನಕ್ಸಲ್‍ಪೀಡಿತ ಎಂದು ಗುರುತಿಸಲಾಗಿದ್ದು, ಅಂತಹ ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಆದ್ಯತೆ ಮೇರೆಗೆ ಕೈಗೊಂಡು ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಶಿಕಾರಿಪುರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಲಿಂಗಾನುಪಾತ ಪುರುಷ ಮತದಾರರಿಗಿಂತ ಹೆಚ್ಚಾಗಿದೆ. ಶಿಕಾರಿಪುರದಲ್ಲಿ ಮಹಿಳಾ ಮತದಾರರ ಲಿಂಗಾನುಪಾತ ಸಾವಿರ ಮತದಾರರಿಗೆ 970 ಇದ್ದು, ಸೊರಬದಲ್ಲಿ 964 ಇದೆ. ಜಿಲ್ಲೆಯ ಒಟ್ಟಾರೆ ಮತದಾರರ ಲಿಂಗಾನುಪಾತ 1004 ಇದೆ. ಸೊರಬ ಹಾಗೂ ಶಿಕಾರಿಪುರದಲ್ಲಿ ಮಹಿಳಾ ಮತದಾರರ ಸಂಖ್ಯೆ ಕಡಿಮೆಯಾಗಲು ಕಾರಣವನ್ನು ಕಂಡುಕೊಂಡು, ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ವಿಶೇಷ ಅಭಿಯಾನ ನಡೆಸಬೇಕು ಎಂದು ಹೇಳಿದರು. ಎಲ್ಲಾ ಮತಗಟ್ಟೆಗಳಲ್ಲಿ ಮತದಾರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿ ನಮೂನೆಗಳು ಲಭ್ಯವಿರಬೇಕು. ಮತದಾರರ ಅಂತಿಮ ಪಟ್ಟಿಯನ್ನು ಕಡ್ಡಾಯವಾಗಿ ಎಲ್ಲಾ ಮತಗಟ್ಟೆಗಳಲ್ಲಿ ಪ್ರದರ್ಶಿಸಬೇಕು. ಮತಗಟ್ಟೆ ಅಧಿಕಾರಿಗಳು ಕರ್ತವ್ಯ ಸಂದರ್ಭದಲ್ಲಿ ತಮ್ಮ ಗುರುತಿನ ಚೀಟಿಯನ್ನು ಧರಿಸಿರಬೇಕು ಎಂದರು.

ಚುನಾವಣಾ ಆಪ್: ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮತದಾರರು ಆನ್‍ಲೈನ್ ಮೂಲಕ ಖಾತ್ರಿಪಡಿಸಬಹುದಾಗಿದೆ. ಇದಕ್ಕಾಗಿ chunavana  ಎಂಬ ಆಪ್ ಪ್ಲೇ ಸ್ಟೋರ್ ನಿಂದ ಡೌನ್‍ಲೋಡ್ ಮಾಡಬಹುದು. ಇದೇ ರೀತಿ ceokarnataka.kar.nic.in ವೆಬ್‍ಸೈಟ್‍ನಲ್ಲಿ ಸಹ ಪರಿಶೀಲಿಸಬಹುದಾಗಿದೆ. ವೆಬ್‍ಸೈಟ್ ಪ್ರವೇಶಿಸಿದ ನಿಗದಿತ ವಿಂಡೋದಲ್ಲಿ ಜಿಲ್ಲೆ, ಹೆಸರು, ಸಂಬಂಧಿಕರ ಹೆಸರು ಬಳಿಕ ವಿಧಾನಸಭಾ ಕ್ಷೇತ್ರದ ಹೆಸರು ನಮೂದಿಸಿದರೆ ಮತದಾರರ ಪಟ್ಟಿಯಲ್ಲಿರುವ ವಿವರ ನೋಡಬಹುದಾಗಿದೆ. ಇದೇ ರೀತಿ 1950 ಟೋಲ್ ಫ್ರೀ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಹ ವಿವರ ಪಡೆಯಬಹುದಾಗಿದೆ ಎಂದರು.

ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ಸಂಗಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News