ಹಾಸನ: ಅಕ್ರಮ ಮರಳು ದಂಧೆಯಲ್ಲಿ ಶಾಮೀಲು ಆರೋಪ; 9 ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್

Update: 2018-11-24 17:44 GMT

ಹಾಸನ, ನ.24: ಲೋಕೋಪಯೋಗಿ ಇಲಾಖೆ 2015ರಲ್ಲಿ ಮರಳು ವಿತರಿಸುವ ಸಮಯದಲ್ಲಿ ಬಾರಿ ಅವ್ಯವಹಾರ ನಡೆಸಿ ಸರಕಾರಕ್ಕೆ 5.48 ಕೋಟಿಗಳಿಗೂ ಹೆಚ್ಚು ನಷ್ಟ ಮಾಡಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಬೇಕು ಎಂಬ ಕನ್ನಡ ಪರ ಸಂಘಟನೆಯೊಂದರ ದೂರಿನ ಅನ್ವಯ ಲೋಕಾಯುಕ್ತ ಸಂಸ್ಥೆ 9 ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿಮಾಡಿ ವಿವರಣೆ ಕೇಳಿದೆ.

ಸಕಲೇಶಪುರ ತಾಲೂಕು ಲೋಕೋಪಯೋಗಿ ಇಲಾಖೆ ಮರಳು ವಿತರಿಸುವ ಸಮಯದಲ್ಲಿ ಕೆಲವು ರಾಜಕಾರಣಿಗಳ ಜೊತೆ ಶಾಮೀಲಾಗಿ 2015ನೇ ಸಾಲಿನಿಂದ ಇಲ್ಲಿಯವರೆಗೂ ಹಲವಾರು ಅಕ್ರಮಗಳನ್ನು ಎಸಗುತ್ತಾ ಬಂದಿರುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ಅಧ್ಯಕ್ಷ ಸತೀಶ್ ಪಟೇಲ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ದೂರನ್ನು ಪರಿಶೀಲಿಸಿರುವ ಲೋಕಾಯುಕ್ತ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಸಕಲೇಶಪುರದಲ್ಲಿ ಈ ಹಿಂದೆ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್, ಎ.ಕೆ. ದುರ್ಗಪ್ಪ ರಂಗನಾಥ್, ಎಇಇ ಸಲ್ಮಾ ಸುಲ್ತಾನ, ಎಂ.ಎಂ. ರವಿ, ಜೆಇ ಅಶ್ವಥ ನಾರಾಯಣ, ಅಬ್ದುಲ್ ರಝಾಕ್, ಎಫ್‌ಡಿಎ ಟಿ.ಕುಮಾರ್ ಹಾಗೂ ಎಂ.ಎಲ್. ಪದ್ಮಜ ಇವರುಗಳಿಗೆ ನೋಟಿಸು ನೀಡಿದೆ ಎನ್ನಲಾಗಿದೆ.

ಲೋಕೋಪಯೋಗಿ ಇಲಾಖೆಯೇ ಮರಳು ಅವ್ಯವಹಾರ, ಭ್ರಷ್ಟಚಾರದಲ್ಲಿ ತೊಡಗಿದ್ದು, ಇದರಿಂದ ಸರಕಾರಕ್ಕೆ ಸುಮಾರು ರೂ.5.48 ಕೋಟಿಗಳಿಗೂ ಹೆಚ್ಚು ನಷ್ಟ ಉಂಟಾಗಿರುತ್ತದೆ. ಇಂದಿನ ದಿನಗಳಲ್ಲಿ ಬಡಜನರು ಮನೆ ಕಟ್ಟಬೇಕಾದರೆ ಮರಳಿಗಾಗಿ ಹೆಚ್ಚು ಹಣ ನೀಡಬೇಕಾಗಿರುವುದರಿಂದ ಬಡಜನರ ಮನೆಯನ್ನು ಕಟ್ಟುವುದು ಕನಸಾಗಿಯೇ ಉಳಿದಿರುತ್ತದೆ. ಕೇವಲ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವಂತೆ ಈ ಮರಳು ಅವ್ಯವಹಾರವು ಜಿಲ್ಲೆಯಾದ್ಯಾಂತ ಯಾವ ತಡೆಯಿಲ್ಲದೇ ನಡೆಯುತ್ತಿದೆ. ಜಿ.ಪಿ.ಎಸ್, ಮತ್ತು ಮರಳು ಗುತ್ತಿಗೆದಾರರು ಮತ್ತು ಇದರಲ್ಲಿ ಶಾಮೀಲಾಗಿರುವ ಭಾಗಿಯಾಗಿದ್ದಾರೆ. ಇಲಾಖೆ ವತಿಯಿಂದ ಲೆಕ್ಕ ತಪಾಸಣೆ ನಡೆಸಿ ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟವನ್ನು ಅಧಿಕಾರಿಗಳಿಂದ ಭರಿಸಬೇಕು. ಈಗ ಯಾರಾದರು ಗುತ್ತಿಗೆದಾರರಿಗೆ ಬಿಲ್ ಪಾವತಿಸ ಬೇಕಾಗಿದ್ದರೆ ಅದನ್ನು ತಡೆಹಿಡಿಯ ಬೇಕು ಇದರ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News