×
Ad

ದೀನ್‍ದಯಾಳ್ ಗ್ರಾ.ವಿ.ಸಂಪರ್ಕ ಯೋಜನೆಗೆ 178.28 ಕೋ.ರೂ. ಮಂಜೂರು: ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್

Update: 2018-11-24 23:32 IST

ಚಿಕ್ಕಮಗಳೂರು, ನ.24: ಜಿಲ್ಲೆಯಲ್ಲಿ ಈ ಬಾರಿ ಸುರಿದ ಅತೀವೃಷ್ಟಿಯಿಂದಾಗಿ ಮೆಸ್ಕಾಂಗೆ 3.8 ಕೋ. ರೂ. ನಷ್ಟವಾಗಿದೆ. ಅತೀವೃಷ್ಟಿಯಿಂದ 2800 ವಿದ್ಯುತ್ ಕಂಬಗಳು, 180 ಟ್ರಾನ್ಸ್‍ಪಾರ್ಮರ್ ಗಳಿಗೆ ಹಾನಿಯಾಗಿದ್ದು, ಇವುಗಳನ್ನು ಬದಲಾಯಿಸಲಾಗಿದೆ, ಜಿಲ್ಲೆಯಲ್ಲಿ ಇದುವರೆಗೂ ಅತೀವೃಷ್ಟಿಯಿಂದ ಹಾನಿಗೊಳಗಾಗಿದ್ದ 200 ಕಿ.ಮೀ ವಿದ್ಯುತ್ ಸಂಪರ್ಕವನ್ನು ಸರಿಪಡಿಸಲಾಗಿದೆ ಎಂದು ಮೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ತಿಳಿಸಿದ್ದಾರೆ.

ಶನಿವಾರ ನಗರದ ಮೆಸ್ಕಾ ಕಚೇರಿಯಲ್ಲಿ ಮೆಸ್ಕಾಂ ಇಲಾಖಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೀವೃಷ್ಟಿಯಿಂದ ಹಾನಿಗೊಳಗಾದ ವಿದ್ಯುತ್ ಕಂಬಗಳು, ಟ್ರಾನ್ಸ್‍ಫಾರ್ಮರ್ ಗಳನ್ನು ಬಹುತೇಕವಾಗಿ ಬದಲಾಯಿಸಲಾಗಿದೆ. ಬಾಕಿ ಕೆಲಸವನ್ನು ಶೀಘ್ರ ಪೂರ್ಣಗೊಳಿಸಲಾಗುವುದು ಎಂದ ಅವರು, ಜಿಲ್ಲೆಯಲ್ಲಿ ವಿದ್ಯುತ್ ಅಭಾವ ಎದುರಾಗಿಲ್ಲ ಎಂದರು. 

ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ವಿದ್ಯುಧೀಕರಣ ಯೋಜನೆಯಡಿಯಲ್ಲಿ ಜಿಲ್ಲೆಗೆ 172.28 ಕೋ. ರೂ. ಅನುದಾನ ಬಿಡುಗಡೆಯಾಗಿದೆ. ಜಿಲ್ಲಾದ್ಯಂತ ಈ ಯೋಜನೆಯಡಿ ಕಾಮಗಾರಿಗಳು ಸಮರೋಪಾದಿಯಲ್ಲಿ ಸಾಗಿದೆ. ಯೋಜನೆಯಡಿ ಸುಮಾರು 56 ಫೀಡರ್ ಗಳನ್ನು ಸ್ಥಾಪಿಸಲಾಗುತ್ತಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಗಳು ಪೂರ್ಣಗೊಂಡಲ್ಲಿ ದಿನದ 24 ಗಂಟೆಯೂ ಗ್ರಾಮೀಣ ಭಾಗಗಳಲ್ಲಿ 3ಪೇಸ್, ಸಿಂಗಲ್ ಪೇಸ್ ವಿದ್ಯುತ್ ನಿರಂತರವಾಗಿ ಪೂರೈಕೆಯಾಗಲಿದೆ ಎಂದ ಅವರು, ಬಿಪಿಎಲ್ ಪಡಿತರ ಚೀಟಿ ಹೊಂದಿದವರು ಈ ಯೋಜನೆಯ ಫಲಾನುಭವಿಗಳಾಗಲಿದ್ದು, ಜಿಲ್ಲೆಯಲ್ಲಿ 11,386 ಮನೆಗಳಿಗೆ ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದರು. 

ಜಿಲ್ಲಾದ್ಯಂತ ಡಿಜಿಟಲ್ ಮೀಟರ್ ಬೋರ್ಡ್ ಅಳವಡಿಸುವ ಯೋಜನೆ ಪ್ರಗತಿಯಲ್ಲಿದ್ದು, ಇದಕ್ಕಾಗಿ 15.38 ಕೋ.ರೂ. ಅನುದಾನ ಮಂಜೂರಾಗಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿನ ಎಲ್ಲ ಮನೆಗಳ ಹಳೆಯ ಮೀಟರ್ ಬೋರ್ಡ್ ಬದಲಿಗೆ ಡಿಜಿಟಲ್ ಮೀಟರ್ ಬೋರ್ಡ್ ಅಳವಡಿಸಲಾಗುವುದು ಎಂದ ಅವರು, ಜಿಲ್ಲೆಯ ಕೆಲವೆಡೆ ಮೆಸ್ಕಾಂ ಇಲಾಖೆಗೆ ಲೈನ್‍ಮನ್‍ಗಳ ಕೊರತೆ ಇದೆ. ಸಿಬ್ಬಂದಿ ನೇಮಕಕ್ಕೆ ಸರಕಾರದ ಮಟ್ಟದಲ್ಲಿ ಕ್ರಮವಹಿಸಲಾಗುತ್ತಿದೆ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೆಸ್ಕಾಂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂದು ದೂರಲಾಗುತ್ತಿದೆ. ಆದರೆ ತಾಂತ್ರಿಕ ಕಾರಣಗಳಿಂದಾಗಿ ಸಕಾಲದಲ್ಲಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿಲ್ಲ. ಕೊಳವೆ ಬಾವಿಗಳಿಗೆ ವಿದ್ಯುತ್ ನೀಡುವುದಷ್ಟೇ ಮೆಸ್ಕಾಂ ಕೆಲಸ. ಆದರೆ ಸಂಬಂಧಿಸಿದ ಇಲಾಖೆ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ಕಳುಹಿಸಿದ ವೇಳೆ ಮೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಹೋದಾಗ ಫಲಾನುಭವಿಗಳು ಕೊಳವೆಬಾವಿಯನ್ನೇ ಕೊರೆಸಿರುವುದಿಲ್ಲ. ಇನ್ನು ಕೆಲವೆಡೆ  ಕುಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ತಡವಾಗುವುದರಿಂದ ಹಾಗೂ ಅರಣ್ಯ ಸಮಸ್ಯೆಯಿಂದಾಗಿ ಕೊಳವೆಬಾವಿಗೆ ವಿದ್ಯುತ್ ಸಂಪರ್ಕ ನೀಡಲು ವಿಳಂಬವಾಗಿರಬಹುದೇ ಹೊರತು ಇದರಲ್ಲಿ ಮೆಸ್ಕಾಂನ ನಿರ್ಲಕ್ಷ್ಯವಿಲ್ಲ. ಜಿಲ್ಲಾದ್ಯಂತ 74 ಗಂಗಾ ಕಲ್ಯಾಣ ಯೋಜನೆಯಡಿ ವಿದ್ಯುತ್ ಸಂಪರ್ಕ ಬಾಕಿ ಇದ್ದು, ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಿಲಾಗುವುದು.

- ಸ್ನೇಹಲ್, ವ್ಯವಸ್ಥಾಪಕ ನಿರ್ದೇಶಕಿ, ಮೆಸ್ಕಾಂ

ಸರಕಾರಿ ಶಾಲೆಗಳ ಬಳಿಯ ವಿದ್ಯುತ್ ಲೈನ್ ಅಪಾಯಕಾರಿ ಎಂಬ ಬಗ್ಗೆ ದೂರು ಬಂದಿರುವ ಕಡೆಗಳಲ್ಲಿ ವಿದ್ಯುತ್ ಮಾರ್ಗವನ್ನು ಬದಲಿಸಲು ಕ್ರಮವಹಿಸಲಾಗಿದೆದಿದುವರೆಗೂ 85 ಸರಕಾರಿ ಶಾಲೆಗಳ ಬಳಿಯ ವಿದ್ಯುತ್ ಮಾರ್ಗಗಳನ್ನು ಬದಲಿಸಲಾಗಿದೆ. ಆದರೆ ಅನುದಾನಿತ ಶಾಲೆಗಳ ಬಳಿಯಲ್ಲಿ ಇಂತಹ ವಿದ್ಯುತ್ ಲೈನ್ ಹಾದು ಹೋಗಿದ್ದಲ್ಲಿ ಹಣ ಪಾವತಿಸಿದಲ್ಲಿ ಕ್ರಮವಹಿಸಲಾಗುವುದು.
- ವೆಂಕಟೇಶ್ ಪ್ರಸಾದ್, ಜಿಲ್ಲಾ ಅಧೀಕ್ಷಕ ಇಂಜಿನಿಯರ್, ಮೆಸ್ಕಾಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News