ಅಂಬರೀಶ್ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಮಂಡ್ಯದಲ್ಲಿ ಅವಕಾಶ: ಸಿಎಂ ಕುಮಾರಸ್ವಾಮಿ
ಬೆಂಗಳೂರು, ನ.25: ನಟ, ಮಾಜಿ ಸಚಿವ ಅಂಬರೀಶ್ ಪ್ರಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಡಾ.ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲೇ ನಡೆಸಲಾಗುವುದು. ಡಾ. ರಾಜ್ ಕುಮಾರ್ ಸ್ಮಾರಕದ ರೀತಿಯಲ್ಲೇ ಅಂಬರೀಶ್ ಅವರಿಗೂ ಸ್ಮಾರಕ ನಿರ್ಮಿಸಲಾಗುವುದು. ಇದಕ್ಕೆ ನಾಡಿನ ಜನತೆಯ ಸಹಕಾರ ಅಗತ್ಯ ಎಂದು ಮುಖ್ಯ ಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಕಂಠೀರವ ಸ್ಟೇಡಿಯಂನಲ್ಲಿ ಅಂಬರೀಶ್ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ಅವರು ಮಂಡ್ಯದ ಜಿಲ್ಲೆಯ ಜನತೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಚಿಂತನೆ ಮಾಡಲಾಗಿದೆ. ಈ ಉದ್ದೇಶಕ್ಕಾಗಿ ರಕ್ಷಣಾ ಇಲಾಖೆಯಿಂದ ಹೆಲಿಕಾಪ್ಟರ್ ಒದಗಿಸುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ. ಅವರು ಹೆಲಿಕಾಪ್ಟರ್ ನೀಡುವುದಕ್ಕೆ ಅರ್ಧಗಂಟೆ ಸಮಯ ಕೇಳಿದ್ದಾರೆ ಎಂದು ಮಾಹಿತಿ ನೀಡಿದರು.
ಹೆಲಿಕಾಪ್ಟರ್ ನಲ್ಲಿ ಪ್ರಾರ್ಥಿವ ಶರೀರವನ್ನು ಕೊಂಡೊಯ್ದು ಮಂಡ್ಯದ ವಿಶ್ವೇಶ್ವರಯ್ಯ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಇಂದು ಸಂಜೆ 4ರಿಂದ ನಾಳೆ ಬೆಳಗ್ಗೆ 6 ಗಂಟೆಯವರೆಗೆ ವ್ಯವಸ್ಥೆ ಮಾಡಲಾಗುವುದು. ಆ ಬಳಿಕ ಮೆರವಣಿಗೆಯ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತರಲಾಗುವುದು. ಇದಕ್ಕೆ ಅಂಬರೀಶ್ ಅಭಿಮಾನಿಗಳು ಸಹಕಾರ ನೀಡಬೇಕು ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.