ಮಂಡ್ಯ ಬಸ್ ದುರಂತದಲ್ಲಿ ಮಡಿದವರ ಗ್ರಾಮಗಳಲ್ಲಿ ನೀರವ ಮೌನ

Update: 2018-11-25 15:22 GMT

ಮಂಡ್ಯ, ನ.26: ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಶನಿವಾರ ಖಾಸಗಿ ಬಸ್ ವಿ.ಸಿ ನಾಲೆಗೆ ಉರುಳಿ ನಡೆದ ಬಸ್ ದುರಂತದಲ್ಲಿ ಸಾವಿಗೀಡಾದ 30 ಮಂದಿಯ ಮೃತರ ಗ್ರಾಮಗಳಲ್ಲಿ ಸೂತಕದ ಛಾಯೆ, ಸ್ಮಶಾನ ಮೌನ, ನೀರವ ಮೌನ ಆವರಿಸಿದೆ. ಸಾವಿಗೀಡಾದವರ ಗ್ರಾಮಗಳಲ್ಲಿ ಜನರಲ್ಲಿ ದುಖಃ ಮಡುಗಟ್ಟಿದೆ.

ದುರಂತದಲ್ಲಿ ತಮ್ಮ ಮಕ್ಕಳು, ಹೆಂಡತಿ, ಗಂಡ ಹಾಗೂ ತಾಯಿ-ಅಜ್ಜಿಯಂದಿರನ್ನು ಕಳೆದುಕೊಂಡ ಸಂಬಂಧಿಕರಲ್ಲಿ ದುಖಃ ಹೆಪ್ಪುಗಟ್ಟಿದೆ. ಬಸ್ ದುರಂತದಲ್ಲಿ  ಮೃತಪಟ್ಟ ವದೇಸಮುದ್ರದ 7ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ರವಿಕುಮಾರ್ ಅವರ ತಾಯಿ ರಾಣಿ ಮಗನನ್ನು ನೆನೆದು ಗದ್ಗದಿತರಾದದ್ದು ನೋಡುಗರನ್ನು ಕಣ್ಣೀರಾಗಿಸಿತ್ತು. ಗ್ರಾಮದಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಮನೆಗೆ ಬಂದ ನಂತರ ಮಗನನ್ನು ನೆನೆದು ರಾಣಿ ಕಣ್ಣೀರಿಟ್ಟರು.

ಮಗನ ಅಂಕಪಟ್ಟಿ ಹಿಡಿದು ದುಖಃಗೊಂಡ ಚಿಕ್ಕೇಗೌಡ -ವಸಂತ ದಂಪತಿಯು ಮಗ ಪ್ರಶಾಂತ್ (15)ನ ಅಂಕಪಟ್ಟಿ, ಮೆಡಲ್‍ ಗಳನ್ನು ನೋಡುತ್ತಲೇ ಗೋಳಿಟ್ಟರು. 'ಏಳನೇ ತರಗತಿಯಲ್ಲಿದ್ದ ಮಗ ಪ್ರಶಾಂತ್ (15) ಚೆನ್ನಾಗಿ ಓದುತ್ತಿದ್ದ, 'ಎ' ಗ್ರೇಡ್ ತೆಗೆದು ಕ್ಲಾಸಿಗೆ ಫಸ್ಟ್ ಬಂದಿದ್ದ. ಹಲವಾರು ಮೆಡಲ್‍ಗಳನ್ನು ತಂದುಕೊಟ್ಟಿದ್ದ ಎಂದು ವದೇಸಮುದ್ರದ ಚಿಕ್ಕೇಗೌಡ-ವಸಂತ ದಂಪತಿ ಕಣ್ಣೀರಾದರು. 

ಮೃತರ ಸಾಮೂಹಿಕ ಅಂತ್ಯಕ್ರಿಯೆ 

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಬಳಿ ಖಾಸಗಿ ಬಸ್ ವಿ.ಸಿ ನಾಲೆಗೆ ಉರುಳಿ ಬಿದ್ದ ಭೀಕರ ಬಸ್ ದುರಂತದಲ್ಲಿ ಸಾವಿಗೀಡಾದ 30 ಮಂದಿ ಮೃತರ ಅಂತ್ಯಕ್ರಿಯೆಯನ್ನು ಆಯಾಯಾ ಗ್ರಾಮಗಳಲ್ಲಿ ನೆರವೇರಿಸಲಾಯಿತು. ಬಸ್ ದುರಂತ ನಡೆದ ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಶವವನ್ನು ಒಪ್ಪಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಸಲಾಯಿತು. ಕೆಲವರ ಅಂತ್ಯಕ್ರಿಯೆಯನ್ನು ಶನಿವಾರ ತಡರಾತ್ರಿಯೇ ನೆರವೇರಿಸಲಾಗಿದೆ.

ತಾಲೂಕಿನ ವದೇಸಮುದ್ರ ಗ್ರಾಮದಲ್ಲಿ ಪವಿತ್ರಾ (11), ಕರಿಯಯ್ಯ (65), ಚಿಕ್ಕಯ್ಯ (40), ಕಮಲಮ್ಮ (55), ಪ್ರಶಾಂತ್ (15), ರತ್ನಮ್ಮ (60), ಶಶಿಕಲಾ (45), ರವಿಕುಮಾರ್ (12) ಅವರ ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ನೆರವೇರಿಸಲಾಯಿತು.

ಉಳಿದಂತೆ ಕೆ.ಆರ್.ಪೇಟೆ ತಾಲೂಕಿನ ಗುಡುಗನಹಳ್ಳಿ ಗ್ರಾಮದಲ್ಲಿ ಜಿ.ಕೆ.ಲಿಖಿತಾ (5), ಡಾಮಡಹಳ್ಳಿಯ ಗ್ರಾಮದಲ್ಲಿ ಪ್ರೇಕ್ಷಾ (2), ಮಂಜುಳಾ (60), ಚಿಕ್ಕಕೊಪ್ಪಲಿನಲ್ಲಿ ಚಂದ್ರು (35), ಪಾಪಣ್ಣ (66), ಪೂಜಾರಿ ಕೆಂಪಯ್ಯ (50), ಯಶೋಧ (18), ದಿವ್ಯಾ, ದೊಡ್ಡಕೊಪ್ಪಲಿನಲ್ಲಿ ಜಯಮ್ಮ (50), ಶ್ರೀರಂಗಪಟ್ಟಣ ತಾಲೂಕಿನ ಕೋಡಿಶೆಟ್ಟಪುರದಲ್ಲಿ ಸೌಮ್ಯ (5), ಕಲ್ಪನಾ (11) ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕನಗನಮರಡಿಯಲ್ಲಿ ನಿಂಗಮ್ಮ (70), ರತ್ನಮ್ಮ (50), ಬೇಬಿ ಗ್ರಾಮದಲ್ಲಿ ಈರಯ್ಯ (60), ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಸಾವಿತ್ರಮ್ಮ (40), ಭುಜವಳ್ಳಿಯಲ್ಲಿ ಪ್ರೀತಿ (15), ಗಾಣದಹೊಸೂರು ಗ್ರಾಮದಲ್ಲಿ ಅನುಷಾ (17), ಹುಲ್ಕೇರೆಯಲ್ಲಿ ಸುಮತಿ (35), ಚಿಕ್ಕಾಡೆಯಲ್ಲಿ ಸೌಮ್ಯ (30), ಕಟ್ಟೇರಿಯಲ್ಲಿ ಶಿವಮ್ಮ (50), ಹುಲಿಕೆರೆಕೊಪ್ಪಲು ಗ್ರಾಮದಲ್ಲಿ ಮಣಿ (35), ರವಿಕುಮಾರ್ (15) ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News