ಮಂಡ್ಯದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನರಿಂದ ಅಂಬರೀಶ್ ರ ಅಂತಿಮ ದರ್ಶನ: ಕುಮಾರಸ್ವಾಮಿ

Update: 2018-11-26 05:12 GMT

ಮಂಡ್ಯ, ನ.26: ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್ ಅವರ ಅಂತಿಮ ದರ್ಶನಕ್ಕೆ ಮಂಡ್ಯ ಜಿಲ್ಲೆಯಲ್ಲಿ ವ್ಯವಸ್ಥೆ ಮಾಡುವುದು ಸರ್ಕಾರಕ್ಕೆ ಸವಾಲಾಗಿತ್ತು. ಹಲವಾರು ಸಮಸ್ಯೆಗಳ ನಡುವೆಯೂ ಅಂತಿಮ ದರ್ಶನ ಸುಸೂತ್ರವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ನಗರದಲ್ಲಿರುವ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ,  ಅಂಬರೀಶ್ ಅವರ ಸ್ವಚ್ಛ ಮನಸ್ಸಿನಿಂದ ಅವರ ಅಂತ್ಯ ಕಾಲದಲ್ಲೂ ಸುಗಮವಾದ ರೀತಿ ಕಾರ್ಯ ನಡೆಯುತ್ತಿದೆ‌‌‌. ಎಲ್ಲರೂ ಕೊಟ್ಟ ಸಹಕಾರಕ್ಕೆ ನಾನು ಆಬಾರಿ ಎಂದು ಕೃತಜ್ಞತೆ ಸಲ್ಲಿಸಿದರು.

ಬೆಂಗಳೂರಿನ ಕಂಠೀರವ ಸ್ಟುಡಿಯೋ ದಲ್ಲಿ ರಾಜ್‍ಕುಮಾರ್ ಅವರ ಸಮಾಧಿಯ ಬಳಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದ ಮುಖ್ಯಮಂತ್ರಿ, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲೇ ಬೇಕು ಅನ್ನೋದು ಅವರ ಅಭಿಮಾನಿಗಳು ಬಯಕೆಯಾಗಿತ್ತು‌‌. ಅದರಂತೆ ಸರ್ಕಾರದ ವತಿಯಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಯಿತು ಎಂದರು.

  ಸುಮಾರು ಎರಡೂವರೆ ಲಕ್ಷ ಜನರು ಮಂಡ್ಯ ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ‌‌. ಮಂಡ್ಯದ ಜನತೆ ಹಾಗೂ ಎಲ್ಲರೂ ಅವರ ಮೇಲೆ ಇಟ್ಟಿರುವ ಪ್ರೀತಿ ಎಂಥದ್ದು ಅಂತ ಇದರಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಸರ್ಕಾರದ ವತಿಯಿಂದ ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಪ್ರಮುಖ ರಸ್ತೆಗಳಲ್ಲಿ ಅಂಬರೀಶ್ ಅವರ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ. ನಂತರ ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿದರು.

ಕಲಾವಿದರು ನಾಡಿಗೆ ಸೇವೆ ಸಲ್ಲಿಸಿದ್ದಾರೆ. ಹಲವಾರು ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಗೌರವ ಕೊಡಬೇಕು. ನನ್ನ ಆರೋಗ್ಯದ ಬಗ್ಗೆ ಕರೆ ಮಾಡಿ ಎಚ್ಚರಿಕೆ ಕೊಡುತ್ತಿದ್ದರು. ನಿಮ್ನ ಸೇವೆ ಸಮಾಜಕ್ಕೆ ಬೇಕು ಎಂದು ಹೇಳುತ್ತಿದ್ದರು‌. ನನಗಿಂತ ಅಂಬರೀಶ್ ಎಂಟು ವರ್ಷ ದೊಡ್ಡವರು. ನನಗೆ ಅವರು ಅಣ್ಣನ ರೀತಿ. ಸರ್ಕಾರದ ವತಿಯಿಂದ ಹಾಕಿಕೊಂಡಿರುವ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ನಮನ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಬಂದಿದೆ. ಸುಮಾರು ಒಂದುವರೆ ಕೋಟಿಯಷ್ಟು ಹಣ ಬಿಡುಗಡೆ ಮಾಡಲಾಗಿದೆ‌. ಮೃತರ ಕುಟುಂಬಸ್ಥರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟದಟರಾಜು, ಪ್ರವಾಸೋದ್ಯಮ ಸಚಿವ ಸಾ‌.ರಾ.ಮಹೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News