ಮಂಡ್ಯ: ಅಂಬರೀಷ್ ಅಭಿಮಾನಿ ಆತ್ಮಹತ್ಯೆ
ಮಂಡ್ಯ, ನ.26: ಅಂಬರೀಷ್ ಅವರ ಪಾರ್ಥೀವ ಶರೀರದ ದರ್ಶನ ಪಡೆದ ಅಭಿಮಾನಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರಿನಲ್ಲಿ ನಡೆದಿದೆ.
ಮದ್ದೂರು ತಾಲೂಕು ಗೊರವನಹಳ್ಳಿ ಗ್ರಾಮದ ಜಿ.ಎಸ್.ಸುರೇಂದ್ರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಇವರು ಗ್ರಾಮಕ್ಕೆ ಸಮೀಪದ ಮದ್ದೂರು ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ರವಿವಾರ ತಡರಾತ್ರಿ ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂಬರೀಶ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ ಮನೆಗೆ ತೆರಳಿದ ಅವರು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಂಬರೀಷ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಸುರೇಂದ್ರ, ತನ್ನ ಕೈಮೇಲೆ ಅಂಬರೀಷ್ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದರು. ಈ ಸಂಬಂಧ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಶನಿವಾರ ತಡರಾತ್ರಿ ಮದ್ದೂರು ತಾಲೂಕಿನ ಹೊಟ್ಟೆಗೌಡನದೊಡ್ಡಿಯ ಅಂಬರೀಷ್ ಅಭಿಮಾನಿ ಎನ್ನಲಾದ ತಮ್ಮಯ್ಯ ಎಂಬುವರು ನಿಡಘಟ್ಟ ರೈಲ್ವೆ ನಿಲ್ದಾಣದ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.