ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನ.27ರಂದು ಡಿಸಿ-ಸಿಇಓಗಳ ಸಭೆ
ಬೆಂಗಳೂರು, ನ. 26: ರಾಜ್ಯದ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು-ನೀರು ಒದಗಿಸುವುದು ಸೇರಿ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಿಎಂ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಾಳೆ(ನ.27) ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓಗಳ ಸಭೆ ನಡೆಯಲಿದೆ.
ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಲಿದ್ದು, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೃಷಿ ಸಚಿವ ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ, ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಹಾಗೂ ವಿವಿಧ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ 100 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದ್ದು, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ತತ್ವಾರವಿದೆ. ಹೀಗಾಗಿ 197 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಜನತೆ ಗುಳೆ ಹೋಗದಂತೆ ತಡೆಯಲು ಹಾಗೂ ಆಡಳಿತ ಯಂತ್ರಾಂಗಕ್ಕೆ ಚುರುಕು ಮುಟ್ಟಿಸಲು ಸಮಾಲೋಚನೆ ನಡೆಸಲಿದ್ದಾರೆ.
ಬೆಳಗಾವಿಯಲ್ಲಿ ಡಿ.10ರಿಂದ ಚಳಿಗಾಲದ ಅಧಿವೇಶ ಆರಂಭಗೊಳ್ಳಲಿದ್ದು, ವಿಪಕ್ಷಗಳ ಆರೋಪಗಳಿಂದ ಪಾರಾಗುವ ದೃಷ್ಟಿಯಿಂದ ಪರಿಹಾರ ಕಾರ್ಯಗಳ ಸಂಬಂಧ ಅಧಿಕಾರಿಗಳಿಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.
ರೈತರ ಸಾಲಮನ್ನಾ ಸೇರಿದಂತೆ ಸರಕಾರದ ಜನಪರ ಯೋಜನೆಗಳ ಸ್ಥಿತಿಗತಿಗಳು ಸೇರಿದಂತೆ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಿಎಂ ಇದೇ ಸಂದರ್ಭದಲ್ಲಿ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಸರಕಾರ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡಲಿದ್ದಾರೆ.
ರಾಜ್ಯ ಸರಕಾರದ ಯೋಜನೆಗಳ ಅನುಷ್ಠಾನದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡದ ಅಧಿಕಾರಿಗಳ ಬಗ್ಗೆಯೂ ತಮ್ಮದೆ ಆದ ಮಾಹಿತಿ ಹೊಂದಿರುವ ಸಿಎಂ ಕುಮಾರಸ್ವಾಮಿ ನಾಳಿನ ಸಭೆಯಲ್ಲಿ ಮೈತ್ರಿ ಸರಕಾರದ ವೇಗಕ್ಕೆ ಸ್ಪಂದಿಸದ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವ ಸಾಧ್ಯತೆಗಳಿವೆ.