ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಕ್ರಮ: ಮುಖ್ಯಮಂತ್ರಿ ಕುಮಾರಸ್ವಾಮಿ
ಮಂಡ್ಯ, ನ.26: ಬೆಂಗಳೂರಿನ ಕಂಠೀರವ ಸ್ಟುಡಿಯೋದ ಡಾ.ರಾಜ್ ಕುಮಾರ್ ಸ್ಮಾರಕದ ಬಳಿ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಷ್ ಅವರ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಸೋಮವಾರ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಿಂದ ಅಂಬರೀಷ್ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ಕೊಂಡೊಯ್ಯುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರದ ವತಿಯಿಂದ ಸ್ಮಾರಕ ನಿರ್ಮಿಸಲಾಗುವುದು ಎಂದರು.
ಅಂಬರೀಷ್ ಅವರ ಅಭಿಮಾನಿಗಳ ಮನಸ್ಸಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ ಸರಕಾರದ ವತಿಯಿಂದ ಅಂತ್ಯಸಂಸ್ಕಾರದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಸುಮಾರು ಎರಡೂವರೆ ಲಕ್ಷ ಮಂದಿ ಮಂಡ್ಯದಲ್ಲಿ ಅಂಬರೀಷ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಜನತೆ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
ಎಳನೀರು ಮಾರುತ್ತಿದ್ದ ಅಂಬರೀಷ್ ಅಭಿಮಾನಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನೋವಿನ ಸಂಗತಿ. ಈ ಅಹಿತಕರ ಸಂಗತಿಯನ್ನು ಬಿಟ್ಟರೆ ಮತ್ತೆ ಯಾವ ದುರ್ಘಟನೆ ನಡೆದಿಲ್ಲ. ನವೆಂಬರ್ ನೋವಿನ ತಿಂಗಳಾಗಿ ಪರಿಣಮಿಸಿದ್ದು, ಇದು ಮರುಕಳಿಸದಿರಲಿ ಎಂದು ಅವರು ಆಶಿಸಿದರು.
ಜಿಲ್ಲೆಯ ಕನಗನಮರಡಿ ಗ್ರಾಮದ ಬಳಿ ಸಂಭವಿಸಿದ ಬಸ್ ಅಪಘಾತದಲ್ಲಿ ಮಡಿದ 30 ಮಂದಿ ಕುಟುಂಬಗಳಿಗೆ ತಲಾ 5 ಲಕ್ಷ ರೂ.ನಂತೆ ಸುಮಾರು ಒಂದೂವರೆ ಕೋಟಿ ರೂ.ಗಳನ್ನು ತಲುಪಿಸಲಾಗಿದೆ. ರೈತರ ಸಾಲಮನ್ನಾ ಪ್ರಕ್ರಿಯೆ ಮುಗಿದಿದ್ದು, ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.