×
Ad

ಸಕ್ಕರೆ ಉತ್ಪಾದನೆ ಕುರಿತು ಸಂಪೂರ್ಣ ಮಾಹಿತಿ ಒದಗಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2018-11-27 21:35 IST

ಬೆಂಗಳೂರು, ನ.27: 2017-18ನೆ ಸಾಲಿನಲ್ಲಿ ರಾಜ್ಯದಲ್ಲಿ ರೈತರು ಬೆಳೆದ ಕಬ್ಬಿನ ಪ್ರಮಾಣ ಹಾಗೂ ಆ ಪೈಕಿ ಕಾರ್ಖಾನೆಗಳಿಗೆ ರವಾನೆಯಾದ ಹಾಗೂ ಅದರಿಂದ ಕಾರ್ಖಾನೆಗಳು ಉತ್ಪಾದಿಸಿದ ಸಕ್ಕರೆ ಪ್ರಮಾಣದ ಕುರಿತು ಮಾಹಿತಿ ಒಳಗೊಂಡ ವರದಿ ನೀಡುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಕಲಬುರಗಿ ಜಿಲ್ಲೆಯ ಆಳಂದದ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕೇಂದ್ರ ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ. ನಾವದಗಿ ಅವರು, ಈ ಅರ್ಜಿ ಕೇಂದ್ರ ಸರಕಾರ ಮತ್ತು ಸಕ್ಕರೆ ಕಾರ್ಖಾನೆ ನಡುವಿನ ವ್ಯಾಜ್ಯವಾಗಿದ್ದರೂ, ಬಹುಮುಖ್ಯವಾಗಿ ಕಬ್ಬು ಬೆಳೆಗಾರ ರೈತರು ಇದರ ಕೇಂದ್ರ ಬಿಂದು. ಆದರೆ, ಈ ಅರ್ಜಿಯಲ್ಲಿ ಅವರು ಪ್ರತಿವಾದಿಗಳೂ ಅಲ್ಲ. ಹೀಗಾಗಿ, ದನಿಯಿಲ್ಲದ ಈ ವರ್ಗಕ್ಕೆ ಹೈಕೋರ್ಟ್ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಕೋರಿಕೆಗೆ ಸ್ಪಂದಿಸಿದ ನ್ಯಾಯಪೀಠ, 2017-18ನೆ ಸಾಲಿನಲ್ಲಿ ರಾಜ್ಯದಲ್ಲಿ ರೈತರು ಬೆಳೆದ ಕಬ್ಬು ಹಾಗೂ ಇದರಲ್ಲಿ ಕಾರ್ಖಾನೆಗಳಿಗೆ ರವಾನೆಯಾದ ಪ್ರಮಾಣ ಮತ್ತು ಅದರಿಂದ ಉತ್ಪಾದನೆಯಾದ ಸಕ್ಕರೆ ಕುರಿತಂತೆ ಸಂಪೂರ್ಣ ಅಂಕಿ ಅಂಶ ಒದಗಿಸಿ ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಮಾಹಿತಿ ನೀಡುವ ಕುರಿತಂತೆ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಕಾರ್ಯದರ್ಶಿ ಹಾಗೂ ಕಬ್ಬು ಆಯುಕ್ತರಿಗೆ ನ್ಯಾಯಪೀಠ ನಿರ್ದೇಶಿಸಿದೆ. ಅಂಕಿ ಅಂಶ ಕೈ ಸೇರಿದ ಮೇಲೆ ಕಬ್ಬು ಬೆಳೆಗಾರರ ಸಮಸ್ಯೆಗೆ ಸೂಕ್ತ ಮಾರ್ಗೋಪಾಯ ರೂಪಿಸಬಹುದು ಎಂಬ ಮೌಖಿಕ ಇಂಗಿತವನ್ನೂ ನ್ಯಾಯಪೀಠ ಇದೇ ವೇಳೆ ವ್ಯಕ್ತಪಡಿಸಿದೆ.

ನಿರ್ಬಂಧ: ಸಕ್ಕರೆ ಉತ್ಪಾದನೆಯ ಶೇ.10ರಷ್ಟಕ್ಕೆ ಮಾತ್ರ ಮಾರಾಟ ಅನುಮತಿ ನೀಡಿ, ಇನ್ನುಳಿದ ಶೇ.90ರಷ್ಟು ಮಾರಾಟಕ್ಕೆ ಕೇಂದ್ರ ಸರಕಾರ ನಿರ್ಬಂಧ ಹೇರಿದೆ. ಶೇ.10ರಷ್ಟು ಮಾರಾಟಕ್ಕೆ ಅನುಮತಿ ನೀಡಿದ ಕಾರಣ ಕಾರ್ಖಾನೆಯಲ್ಲಿ ಸಕ್ಕರೆ ಉಳಿದು ನಮಗೆ ನಷ್ಟ ಉಂಟಾಗಿದೆ ಎಂದು ಕಂಪೆನಿ ಆಕ್ಷೇಪಿಸಿದೆ. ಹೀಗಾಗಿ, ಮುಕ್ತ ಮಾರುಕಟ್ಟೆಯಲ್ಲಿ ಅನುಮತಿ ನೀಡಬೇಕೆಂದು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News