ಮೈಸೂರು ಮಹಾನಗರ ಪಾಲಿಕೆ: ನಾಲ್ಕು ಸ್ಥಾಯಿ ಸಮಿತಿಗಳಿಗೆ ಅವಿರೋಧ ಆಯ್ಕೆ

Update: 2018-11-27 17:28 GMT

ಮೈಸೂರು,ನ.27: ಮೈಸೂರು ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಇಂದು ನಾಲ್ವರು ಮಹಾನಗರ ಪಾಲಿಕೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು.

ಈಗಾಗಲೇ ಮೇಯರ್ ಉಪಮೇಯರ್ ಆಯ್ಕೆಯಾಗಿದ್ದು, ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರುಗಳ ಆಯ್ಕೆಯ ಚುನಾವಣೆ ಮಂಗಳವಾರ ನಡೆದು ನಾಲ್ವರನ್ನು ಆಯ್ಕೆಮಾಡಲಾಯಿತು.

ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಒಂದು ವರ್ಷಗಳ ವರೆಗೆ ಇದ್ದು, ತೆರಿಗೆ ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿಗೆ ವಾರ್ಡ್ ನಂ.61ರ ಶೋಭಾ ನಾಮಪತ್ರ ಸಲ್ಲಿಸಿದ್ದರು. ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿಗೆ ವಾರ್ಡ್ ನಂಬರ್ 24ರ ರಮೇಶ್(ರಮಣಿ), ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿಗೆ ವಾರ್ಡ್ ನಂಬರ್ 1ರ ಲಕ್ಷ್ಮಿ ಶಿವಣ್ಣ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ವಾರ್ಡ್ ನಂಬರ್ 5ರ ಉಷಾ ನಾಮಪತ್ರ ಸಲ್ಲಿಸಿದ್ದರು.

ಜೆಡಿಎಸ್ ಮತ್ತು ಕಾಂಗ್ರೆಸ್ ನಲ್ಲಿ ಅಧ್ಯಕ್ಷರ ಗದ್ದಿಗೆಗಾಗಿ ಪೈಪೋಟಿ ನಡೆದಿತ್ತು. ಮೈತ್ರಿಯಲ್ಲಿಯೇ ಗದ್ದಿಗೆಗಾಗಿ ಗುದ್ದಾಟ ನಡೆದಿತ್ತು. ಇದರಿಂದಾಗಿ ಮೇಯರ್ ನೇತೃತ್ವದಲ್ಲಿ ಎರಡು ಪಕ್ಷಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ, ಒಮ್ಮತದ ಆಯ್ಕೆ ಮಾಡಲಾಯಿತು. 

ಈ ನಾಲ್ವರು ಮಾತ್ರ ನಾಮಪತ್ರ ಸಲ್ಲಿಕೆ ಮಾಡದ್ದರಿಂದ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಯಿತು. ತೆರಿಗೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶೋಭಾ ಸುನೀಲ್, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರಮೇಶ್, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಎಂ.ಲಕ್ಷ್ಮಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾದರು.

ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಷಾ ಅವರನ್ನು ಆಯ್ಕೆ ಮಾಡಲಾಯಿತು. ನೂತನ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ವೇಳೆ ಉಪಮೇಯರ್ ಶಫೀ ಅಹ್ಮದ್, ಪಾಲಿಕೆಯ ಆಯುಕ್ತ ಕೆ.ಹೆಚ್.ಜಗದೀಶ್, ಉಪಾಯುಕ್ತ ದಯಾನಂದ್ ಉಪಸ್ಥಿತರಿದ್ದರು. ಮೇಯರ್ ಪುಷ್ಪಲತಾ ಜಗನ್ನಾಥ್ ಹೂಗುಚ್ಛ ನೀಡಿ ನೂತನ ಸ್ಥಾಯಿ ಸಮಿತಿ ಅದ್ಯಕ್ಷರುಗಳನ್ನು ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News