×
Ad

ಮಂಡ್ಯ: ಪರವಾನಗಿ ಇಲ್ಲದ ಖಾಸಗಿ ಬಸ್ ವಶ

Update: 2018-11-27 23:24 IST

ಮಂಡ್ಯ, ನ.27: ಪರವಾನಗಿಯಿಲ್ಲದೆ ಅನಧಿಕೃತವಾಗಿ ಕೃಷ್ಣರಾಜಪೇಟೆ ಪಟ್ಟಣದಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಬಸ್ಸನ್ನು ಸಾರ್ವಜನಿಕರು ತಡೆದು  ಪೋಲಿಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ನಡೆದಿದೆ.

ಶನಿವಾರ ಪಾಂಡವಪುರ ತಾಲೂಕಿನ ಕನಗನಮರಡಿಯ ಬಳಿ ಖಾಸಗಿ ಬಸ್ಸು ನಾಲೆಗೆ ಉರುಳಿಬಿದ್ದು 30 ಜನ ಅಮಾಯಕ ಪ್ರಯಾಣಿಕರನ್ನು ಬಲಿ ತೆಗೆದುಕೊಂಡ ನಂತರ ಎಚ್ಚೆತ್ತುಕೊಂಡಿದ್ದ ಸಾರಿಗೆ ಅಧಿಕಾರಿಗಳು ಮತ್ತು ಪೊಲೀಸರು ಪರವಾನಗಿ ಇಲ್ಲದ ಬಸ್‍ಗಳ ಸಂಚಾರ ನಿರ್ಬಂಧಿಸಿದ್ದರು.
ಆದರೆ, ಮೂರು ದಿನದಿಂದ ಸಂಚಾರ ಸ್ಥಗಿತಗೊಳಿಸಿದ್ದ ಪರವಾನಗಿ ಇಲ್ಲದ ಖಾಸಗಿ ಬಸ್‍ಗಳು ಮಂಗಳವಾರ ಮತ್ತೆ ಸಂಚಾರ ಆರಂಭಿಸಿದ್ದವು. ಈ ಹಿನ್ನೆಲೆಯಲ್ಲಿ ಜನಪರ ಹೋರಾಟಗಾರ, ಆಸರೆ ಸಮಾಜಸೇವಾ ಟ್ರಸ್ಟಿನ ಅಧ್ಯಕ್ಷ ಎಚ್.ಬಿ.ಮಂಜುನಾಥ್ ನೇತೃತ್ವದಲ್ಲಿ ನ್ಯಾಷನಲ್ ಟ್ರಾವೆಲ್ಸ್‍ಗೆ ಸೇರಿದ ಬಸ್ಸನ್ನು ತಡೆದು ಪೋಲಿಸರಿಗೆ ಒಪ್ಪಿಸಿದರು.

ಬಸ್ಸಿಗೆ ಪರವಾನಗಿ ಇಲ್ಲದ ವಿಷಯ ಖಚಿತಪಡಿಸಿಕೊಂಡ ಪಿಸ್ಸೈ ಎಚ್.ಎಸ್.ವೆಂಕಟೇಶ್, ಬಸ್ಸನ್ನು ವಶಕ್ಕೆ ಪಡೆದುಕೊಂಡು ಚಾಲಕ ಚಾಲಕ ಶಿವೇಗೌಡರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ವಿಷಯ ತಿಳಿದ ನಾಗಮಂಗಲದ ಸಾರಿಗೆ ಇನ್ಸ್‍ಪೆಕ್ಟರ್ ಸತೀಶ್ ಪಟ್ಟಣಕ್ಕೆ ಆಗಮಿಸಿ ಪೊಲೀಸ್ ಠಾಣೆಯ ಆವರಣದಲ್ಲಿ ನಿಂತಿದ್ದ  ಬಸ್ಸನ್ನು ಪರಿಶೀಲಿಸಿ ಸಾರಿಗೆ ಇಲಾಖೆ ವತಿಯಿಂದಲೂ ಪ್ರಕರಣ ದಾಖಲಿಸಿ ಬಸ್ಸಿನ ಮಾಲಕರಿಗೆ ನೊಟೀಸ್ ಜಾರಿ ಮಾಡುವುದಾಗಿ ತಿಳಿಸಿದರು. 

ನ್ಯಾಷನಲ್ ಟ್ರಾವೆಲ್ಸ್ ಸಂಸ್ಥೆಯ ಆರಕ್ಕೂ ಹೆಚ್ಚು ಬಸ್ಸುಗಳು ಪ್ರತಿನಿತ್ಯವೂ ಪಟ್ಟಣದಿಂದ ನಾಗಮಂಗಲ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣಿಕರನ್ನು ಕೊಂಡೊಯ್ಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News