ನ.30ರಿಂದ 4ನೇ ಸುತ್ತಿನ ಕಾಫಿ ಡೇ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‍ಶಿಪ್
ಚಿಕ್ಕಮಗಳೂರು, ನ.27: ಕಾಫಿ ಡೇ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‍ಶಿಪ್‍ನ ನಾಲ್ಕನೇ ಸುತ್ತಿನ ಕಾರ್ ರ್ಯಾಲಿ ನ.30ರಿಂದ ಡಿ.3ರವರೆಗೆ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಜಯಂತ್ ಪೈ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರ್ಯಾಲಿಯ ಮೂರು ಸುತ್ತುಗಳು ಮುಗಿದಿದ್ದು, ರ್ಯಾಲಿಯ 4ನೇ ಸುತ್ತು ಇದಾಗಿದೆ. ಮೂರು ಸುತ್ತುಗಳ ನಂತರ 61 ಅಂಕಗಳನ್ನು ಪಡೆದಿರುವ ಮಹೇಂದ್ರ ಅಡ್ವೆಂಚರ್ಸ್ ತಂಡದ ಅಮಿತ್ರಜತ್ ಘೋಶ್ ಹಾಗೂ ಸಹ ಚಾಲಕ ಆಶ್ವಿನ್ ನಾಯಕ್ ಮುನ್ನಡೆಸಲಿದ್ದಾರೆ. 50 ಅಂಕಗಳನ್ನು ಪಡೆದಿರುವ ಗೌರವ್ ಗಿಲ್ ಹಾಗೂ ಮೂಸಾ ಷರೀಫ್ ಎರಡನೇ ಸ್ಥಾನದಲ್ಲಿದ್ದಾರೆ. 4ನೇ ಹಂತದ ಪಂದ್ಯ ತೀವ್ರ ಕುತೂಹಲಕಾರಿಯಾಗಿದೆ ಎಂದರು.
ರ್ಯಾಲಿಯ 4ನೇ ಸುತ್ತಿನ ಪಂದ್ಯಕ್ಕೆ ನ.29ರಂದು ಸಂಜೆ ನಗರದ ಕಾಫಿ ಡೇಯಲ್ಲಿ ಸಾಂಕೇತಿಕ ಚಾಲನೆ ನೀಡಲಾಗುವುದು. ನ.30ರಂದು ಮಧ್ಯಾಹ್ನ ಆಂಬರ್ ವ್ಯಾಲಿ ಶಾಲೆಯ ಆವರಣದಲ್ಲಿ ಪ್ರೇಕ್ಷಕರ ಸುತ್ತು ನಡೆಯಲಿದೆ. ಇಲ್ಲಿ ಚಾಲಕರು 2.1 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ. ಡಿ.1 ಮತ್ತು 2ರಂದು ರ್ಯಾಲಿಯು ಕಾಫಿ ಡೇ ಗ್ಲೋಬಲ್ ಎಸ್ಟೇಟ್ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ನಡೆಯಲಿದೆ ಎಂದ ಅವರು, ಮೂಡಿಗೆರೆ ಹಾಗೂ ಬೇಲೂರು ತಾಲೂಕಿನ ಕಾಫಿ ತೋಟಗಳ ಅಂಕು ಡೊಂಕಿನ ಮಣ್ಣಿನ ರಸ್ತೆಯಲ್ಲಿ ರ್ಯಾಲಿ ನಡೆಯಲಿದೆ ಎಂದರು.
ಚಟ್ಟನಹಳ್ಳಿ, ಚಂದ್ರಾಪುರ ಹಾಗೂ ಕಮ್ಮರಗೋಡು ತೋಟಗಳನ್ನು ರ್ಯಾಲಿಗಾಗಿ ಗುರುತಿಸಲಾಗಿದೆ. ಡಿ.1ರಂದು ಎಲ್ಲ ಸ್ಪರ್ಧಾಳುಗಳು ಈ ಮೂರು ಎಸ್ಟೇಟ್‍ಗಳಲ್ಲಿ ಎರಡು ಬಾರಿ ಕಾರುಗಳನ್ನು ಓಡಿಸುವರು. ಡಿ.3ರಂದು ರ್ಯಾಲಿಯ ಕೊನೆಯ ದಿನವಾಗಿದ್ದು ಎಲ್ಲ ಸ್ಪರ್ಧಾಳುಗಳು ಒಂದು ಬಾರಿ ಚಾಲನೆ ಮಾಡುವರು. ಎರಡು ದಿನಗಳ ಕಾಲ ಸ್ಪರ್ಧಾಳುಗಳು ಒಟ್ಟಾರೆ 229 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ ಎಂದ ಅವರು, ಐ.ಎನ್.ಆರ್.ಸಿ.ಯ 3 ಸುತ್ತುಗಳ ನಂತರ ಕರ್ಣ ಕಡೂರು ಹಾಗೂ ಕಾಂತರಾಜ್ ಮೂರನೇ ಸ್ಥಾನದಲ್ಲಿ ಹಾಗೂ ಗೋಶ್ ಹಾಗೂ ಗಿಲ್ ಐ.ಎನ್.ಆರ್.ಸಿ. 2 ವರ್ಗದಲ್ಲಿ ಮುಂದಿದ್ದಾರೆ. ಐ.ಎನ್.ಆರ್.ಸಿ. 3 ವಿಭಾಗದಲ್ಲಿ ಅರೂರ್ ವಿಕ್ರಂ ರಾವ್ ಹಾಗೂ ಡೀನ್ ಮಸ್ಕರೇನಸ್ ಮುಂದಿದ್ದಾರೆ ಎಂದು ತಿಳಿಸಿದರು.
ಕ್ಲಬ್‍ನ ಉಪಾಧ್ಯಕ್ಷ ಫಾರೂಕ್ ಅಹಮದ್ ಮಾತನಾಡಿ, ಕಳೆದ 2 ವರ್ಷಗಳಿಂದ ಐ.ಎನ್.ಆರ್.ಸಿ. ರ್ಯಾಲಿಯೊಂದಿಗೆ ಎಪಿಆರ್‍ಸಿ ರ್ಯಾಲಿಯೂ ಕಾಫಿ ನಾಡಿನಲ್ಲಿ ನಡೆಯುತ್ತಿತ್ತು. ಈಗಾಗಲೆ ಎ.ಪಿ.ಆರ್.ಸಿ. ವಿಜೇತರು ಎಂಬುದು ತಿಳಿದು ಬಂದಿದೆ. ಆದ ಕಾರಣ ಬಹುತೇಕ ಎಲ್ಲ ವಿದೇಶಿ ಸ್ಪರ್ಧಾಳುಗಳು ವಿಶ್ವ ರ್ಯಾಲಿ ಚಾಂಪಿಯನ್‍ಶಿಪ್‍ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇಲ್ಲಿಗೆ ಕೇವಲ 3 ಜನ ಸ್ಪರ್ಧಾಳುಗಳು ಬರುತ್ತಾರೆ ಎಂದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ನಾವು ಎ.ಪಿ.ಆರ್.ಸಿ. ಚಾಂಪಿಯನ್‍ಶಿಪ್ ನಡೆಸಲು ಒಪ್ಪಲಿಲ್ಲ. ಈ ಬಾರಿಯ ಐ.ಎನ್.ಆರ್.ಸಿ. ರ್ಯಾಲಿ ಚಾಂಪಿಯನ್‍ಶಿಪ್‍ಗೆ ದಾಖಲೆಯ 47 ಸ್ಪರ್ಧಾಳುಗಳು ನೋಂದಣಿ ಮಾಡಿಸಿದ್ದಾರೆ. ಈ ಪ್ರಮಾಣದಲ್ಲಿ ಸ್ಪರ್ಧಾಳುಗಳು ಯಾವಾಗಲೂ ಪಾಲ್ಗೊಂಡಿರಲಿಲ್ಲ. ಇದೊಂದು ದಾಖಲೆ ಎಂದರು.
ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋಟ್ರ್ಸ್ ಕ್ಲಬ್‍ನ ಮಾಚಯ್ಯ, ಅಭಿಜಿತ್ ಪೈ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.