ಶೋಕದಲ್ಲೂ ಜನ್ಮದಿನ ಆಚರಣೆಯಿಂದ ಬಿಜೆಪಿಯ ವಿಕೃತ ಸಂಸ್ಕೃತಿಯ ಅನಾವರಣ: ಕಾಂಗ್ರೆಸ್ ಮುಖಂಡ ದಿನೇಶ್ ಕೆ. ಶೆಟ್ಟಿ

Update: 2018-11-27 18:14 GMT

ದಾವಣಗೆರೆ, ನ.27: ರಾಜ್ಯ ಹಿರಿಯ ರಾಜಕಾರಣಿಗಳನ್ನು ಕಳೆದುಕೊಂಡು ಶೋಕದ ಸಂದರ್ಭದಲ್ಲಿ ಶಾಸಕ ರವೀಂದ್ರನಾಥ್ ಜನ್ಮದಿನ ಆಚರಿಸಿಕೊಂಡಿರುವುದು ಬಿಜೆಪಿಯ ವಿಕೃತ ಸಂಸ್ಕೃತಿ ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಟೀಕಿಸಿದ್ದಾರೆ.

ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕೇಂದ್ರದ ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಾದ ಎಂ.ಎಚ್. ಅಂಬರೀಷ ಹಾಗೂ ಸಿ.ಕೆ. ಜಾಫರ್ ಶರೀಫ್ ಅವರಿಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಸಚಿವ, ಬಿಜೆಪಿಯ ಅನಂತಕುಮಾರ್ ನಿಧನರಾದಾಗ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿತ್ತು. ಆದರೆ, ಬಿಜೆಪಿಗರು ರಾಜ್ಯದ ಇಬ್ಬರು ಜನನಾಯಕರು ನಿಧನರಾದಾಗಲೂ ವಿಜೃಂಭಣೆಯ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಶೋಭೆಯಲ್ಲ. ಹಣ, ಅಧಿಕಾರಕ್ಕಾಗಿ ಮಾತ್ರ ಉದಯಿಸಿರುವ ಬಿಜೆಪಿಗೆ ಸಂಸ್ಕೃತಿಯೇ ಇಲ್ಲ ಎಂದು ಅವರು ಕಿಡಿಕಾರಿದರು.

ಜಾಫರ್ ಶರೀಫ್ ಹಾಗೂ ನಟ, ರಾಜಕಾರಣಿ ಅಂಬರೀಷ್ ಮೇರು ವ್ಯಕ್ತಿತ್ವವುಳ್ಳ ಸಜ್ಜನ ರಾಜಕಾರಣಿಗಳು. ಇವರು ಜಾತಿ, ಮತ, ಪಂಥ ಮೀರಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ದು ಸಮಾನತೆ ಸಾರಿದವರು. ಇಂತಹ ಮಹಾನ್ ವ್ಯಕ್ತಿಗಳ ಅಗಲಿಕೆ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಅವರು ನಡೆದ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ ಎಂದರು.

ಜಿಪಂ ಸದಸ್ಯ ಬಸವಂತಪ್ಪ ಮಾತನಾಡಿದರು. ಸಭೆಯಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಜಿಪಂ ಸದಸ್ಯ ಓಬಳೇಶಪ್ಪ, ಪಾಲಿಕೆ ಸದಸ್ಯ ಹಾಲೇಶ್, ಜೆ.ಬಿ. ಲಿಂಗರಾಜ್, ಅಯೂಬ್ ಪೈಲ್ವಾನ್, ಮುಜಾಹಿದ್, ನಲ್ಕುಂದ ಹಾಲೇಶ್, ಯತಿರಾಜ್ ಮಠದ್, ದಾದಾಪೀರ್, ಆರೋಗ್ಯಸ್ವಾಮಿ, ಗಣೇಶ್ ಮತ್ತಿತರರಿದ್ದರು.

‘ಸಿಎಂ ಹುದ್ದೆ ಆಮಿಷ ಧಿಕ್ಕರಿಸಿದ್ದ ಜಾಫರ್ ಶರೀಫ್’

ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಮಾತನಾಡಿ, ಹಿಂದೊಮ್ಮೆ ಅರಸು, ಡಿ.ಬಿ. ಚಂದ್ರೇಗೌಡ ಮತ್ತಿತರರು ಕಾಂಗ್ರೆಸ್ ತೊರೆದು ಬೇರೆ ಪಕ್ಷ ಕಟ್ಟಲೆತ್ನಿಸಿದಾಗ ಚಂದ್ರೇಗೌಡರು ಶರೀಫ್ ಅವರಿಗೆ ಸಿಎಂ ಹುದ್ದೆಯ ಆಮಿಷ ತೋರಿ ಕಾಂಗ್ರೆಸ್‌ನಿಂದ ಹೊರಬರುವಂತೆ ಕೇಳಿಕೊಂಡರು. ಆದರೆ, ಶರೀಫ್ ಅವರು ತನಗೆ ಪಕ್ಷನಿಷ್ಠೆಯೇ ಮುಖ್ಯ. ಹಾಗಾಗಿ, ತಾನು ಇಂದಿರಾಗಾಂಧಿಯವರೊಂದಿಗೆ ಕಾಂಗ್ರೆಸ್‌ನಲ್ಲೇ ಇರುವೆ ಎಂದು ಬಂದಂತಹ ಸಿಎಂ ಹುದ್ದೆಯ ಅವಕಾಶವನ್ನು ನಿರಾಕರಿಸಿದಂತಹ ದಿಟ್ಟನಡೆಯ ವ್ಯಕ್ತಿಯಾಗಿದ್ದರು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News