ಶಿವಮೊಗ್ಗ: ರೈತನಿಂದ ಲಂಚ ಸ್ವೀಕಾರ ವೇಳೆ ಎಸಿಬಿ ಬಲೆಗೆ ಬಿದ್ದ ಮೆಸ್ಕಾಂ ಜೂನಿಯರ್ ಇಂಜಿನಿಯರ್
ಶಿವಮೊಗ್ಗ, ನ. 27: ಮೆಸ್ಕಾಂ ಕಚೇರಿಯಲ್ಲಿಯೇ ರೈತರೋರ್ವರಿಂದ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಮೆಸ್ಕಾಂ ಜೂನಿಯರ್ ಇಂಜಿನಿಯರ್ ಒಬ್ಬರನ್ನು ಭ್ರಷ್ಟಾಚಾರ ನಿಯಂತ್ರಣ ದಳ (ಎಸಿಬಿ) ದ ಪೊಲೀಸರು ದಾಳಿ ನಡೆಸಿ ಬಂಧಿಸಿದ ಘಟನೆ ಜಿಲ್ಲೆಯ ಶಿಕಾರಿಪುರ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ಮಂಜಪ್ಪ (56) ಬಂಧಿತ ಮೆಸ್ಕಾಂ ಇಂಜಿನಿಯರ್ ಎಂದು ಗುರುತಿಸಲಾಗಿದೆ. ಎ.ಸಿ.ಬಿ. ಡಿವೈಎಸ್‍ಪಿ ಚಂದ್ರಪ್ಪ ನೇತೃತ್ವದ ಎಸಿಬಿ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಆಪಾದಿತ ಎಂಜಿನಿಯರ್ ವಿರುದ್ದ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದೆ.
ಘಟನೆ ಹಿನ್ನೆಲೆ: ಶಿಕಾರಿಪುರ ತಾಲೂಕು ಅಂಬಾರಗೊಪ್ಪ ಹೋಬಳಿಯ ಗಾಂಧಿನಗರ ಗ್ರಾಮದ ನಿವಾಸಿ ರಾಮಪ್ಪ ಎಂಬುವರು ಅಕ್ರಮ ಸಕ್ರಮ ಯೋಜನೆಯಡಿ ಕಳೆದ ಕೆಲ ವರ್ಷಗಳ ಹಿಂದೆ ತಮ್ಮ ಜಮೀನಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಹಾಗೂ ಪ್ರತ್ಯೇಕ ವಿದ್ಯುತ್ ಪರಿವರ್ತಕ ಅಳವಡಿಕೆಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಅವರಿಗೆ ವಿದ್ಯುತ್ ಪರಿವರ್ತಕ ಮಂಜೂರಾಗಿದೆ.
ಇದರ ಅಳವಡಿಕೆಗೆ 40 ಸಾವಿರ ರೂ. ಲಂಚ ನೀಡುವಂತೆ ಆಪಾದಿತ ಜೂನಿಯರ್ ಎಂಜಿನಿಯರ್ ಮಂಜಪ್ಪರವರು ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಈ ಕುರಿತಂತೆ ದೂರುದಾರ ರೈತನು ಎಸಿಬಿ ಪೊಲೀಸರ ಗಮನಕ್ಕೆ ತಂದಿದ್ದರು. ಇದರ ಆಧಾರದ ಮೇಲೆ ಎ.ಸಿ.ಬಿ. ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಮಂಗಳವಾರ ಆಪಾದಿತ ಇಂಜಿನಿಯರ್ ರೈತನಿಂದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿ ಲಂಚದ ಹಣದ ಸಮೇತ ವಶಕ್ಕೆ ಪಡೆದಿದ್ದಾರೆ.