ಶಿವಮೊಗ್ಗ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ ಆರೋಪ; ಶಿಕ್ಷಕ ಪೊಲೀಸ್ ವಶಕ್ಕೆ

Update: 2018-11-27 18:20 GMT

ಶಿವಮೊಗ್ಗ, ನ. 27: ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪದ ಮೇರೆಗೆ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೋರ್ವರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಜಡೆ ಗ್ರಾಮದಲ್ಲಿ ಮಂಗಳವಾರ ನಡೆದಿದೆ. 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಸವರಾಜ್ ಮಾಸೂರು (56) ಆರೋಪಿತ ವ್ಯಕ್ತಿ ಎಂದು ಗುರುತಿಸಲಾಗಿದೆ. ಶಾಲೆಯ 6 ಮತ್ತು 7 ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸುತ್ತಿದ್ದರು. ಪಾಠ-ಪ್ರವಚನದ ಅವಧಿಯಲ್ಲಿ ವಿದ್ಯಾರ್ಥಿನಿಯರ ಮೈ, ಕೈ ಮುಟ್ಟುವುದು ಮಾಡುತ್ತಿದ್ದರು ಎನ್ನಲಾಗಿದೆ. 

ಈ ಕುರಿತಂತೆ ಕೆಲ ವಿದ್ಯಾರ್ಥಿನಿಯರು ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಗ್ರಾಮಸ್ಥರು ಶಾಲೆಗೆ ಆಗಮಿಸಿ ಆರೋಪಿತ ಶಿಕ್ಷಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತದನಂತರ ಶಿಕ್ಷಕನನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ. ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆನವಟ್ಟಿ ಠಾಣೆ ಪೊಲೀಸರು ಶಿಕ್ಷಕನನ್ನು ವಶಕ್ಕೆ ಪಡೆದು, ತನಿಖೆ ಮುಂದುವರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News