ಹಾಸನ: ಹೆಚ್.ಎಸ್.ಪ್ರಕಾಶ್ ಅಂತಿಮ ದರ್ಶನಕ್ಕೆ ಭಾರೀ ಜನಸ್ತೋಮ; ಬುಧವಾರ ಅಂತ್ಯಸಂಸ್ಕಾರ
ಹಾಸನ,ನ.27: ಸರಳ ಸಜ್ಜನಿಕೆಯ ಹಾಗೂ ನಗುಮುಖದಲ್ಲಿ ಮಾತನಾಡಿಸುವ ಗುಣವುಳ್ಳ ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಹೆಚ್.ಎಸ್. ಪ್ರಕಾಶ್ ಮಂಗಳವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕೊನೆ ಉಸಿರು ಎಳೆದಿದ್ದು, ಅವರ ಪ್ರಾಥೀವ ಶರೀರವನ್ನು ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತರಲಾಯಿತು.
ಅಂತಿಮ ದರ್ಶನ ಮಾಡಲು ಜಿಲ್ಲಾಡಳಿತ ಸಕಲಸಿದ್ಧತೆಯನ್ನು ಮಾಡಿಕೊಂಡಿದ್ದು, ಸಂಜೆ 6 ಗಂಟೆ ಹೊತ್ತಿಗೆ ಆಗಮಿಸಿದಾಗ ಸ್ಥಳದಲ್ಲಿ ಸಾವಿರಾರು ಜನರು ಜಮಾಯಿಸಿದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಕೆ. ಜವರೇಗೌಡ, ಜೆಡಿಎಸ್ ಮುಖಂಡ ಕೆ.ಎಂ. ರಾಜೇಗೌಡ, ಸಮಾಜಸೇವಕ ಗುರುರಾಜು ಹೆಬ್ಬಾರ್, ಹಿರಿಯ ನಾಗರೀಕ ವೇದಿಕೆ ಸಂಚಾಲಕ ಬಿ.ಕೆ. ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ವಿಶ್ವನಾಥ್, ಅಪರ ಜಿಲ್ಲಾಧಿಕಾರಿ ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ, ಜಯರಾಂ, ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ, ಲಯನ್ಸ್ ಸೇವಾ ಸಂಸ್ಥೆ ಅಧ್ಯಕ್ಷ ಶಿವಸ್ವಾಮಿ ಇತರರು ಉಪಸ್ಥಿತರಿದ್ದರು. ಪುತ್ರ ಸ್ವರೂಪ್, ಸಹೋದರರಾದ ಹೆಚ್.ಎಸ್.ಅನೀಲ್ ಕುಮಾರ್, ದೇವೇಂದ್ರ ಸ್ಥಳದಲ್ಲೇ ಇದ್ದರು.
ಬುಧವಾರ ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹಾಸನಕ್ಕೆ ಆಗಮಿಸಿ ಮೃತ ಹೆಚ್.ಎಸ್. ಪ್ರಕಾಶ್ ರವರ ಅಂತಿಮ ದರ್ಶನ ಮಾಡಲಿದ್ದಾರೆ. ನಂತರ ಮದ್ಯಾಹ್ನ 1-30ಕ್ಕೆ ತಾಲೂಕಿನ ಶಾಂತಿಗ್ರಾಮ ಹೆಚ್. ಆಲದಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.