ಪ್ರವಾಸ ಬಂದಿದ್ದ ಕೇರಳ ಮೂಲದ ಇಂಜಿನಿಯರ್ ಚಿಕ್ಕಮಗಳೂರಿನಲ್ಲಿ ನಾಪತ್ತೆ
ಚಿಕ್ಕಮಗಳೂರು, ನ.28: ಕೇರಳದಿಂದ ಬೈಕ್‍ನಲ್ಲಿ ಜಿಲ್ಲಾ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಕೊಪ್ಪ ತಾಲೂಕು ವ್ಯಾಪ್ತಿಯ ನದಿಯೊಂದರ ಬಳಿ ವ್ಯಕ್ತಿಯ ಬೈಕ್ ಪತ್ತೆಯಾಗಿರುವುದರಿಂದ ನಾಪತ್ತೆ ಪ್ರಕರಣ ಹಲವು ಶಂಕೆಗೆ ಕಾರಣವಾಗಿದೆ.
ಕೇರಳದ ಕ್ಯಾಲಿಕಟ್‍ನ ಮೊಕೇರಿ ಗ್ರಾಮದ ನಿವಾಸಿ ಸತ್ಯನ್ ಎಂಬವರ ಮಗನಾಗಿರುವ 35 ವರ್ಷದ ಸಂದೀಪ್ ಕಳೆದ ಮೂರು ದಿನಗಳ ಹಿಂದೆ ತನ್ನ ಬೈಕ್‍ನಲ್ಲಿ ಏಕಾಂಗಿಯಾಗಿ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದ್ದು, ಶೃಂಗೇರಿಗೆ ಬಂದಿದ್ದಾಗ ತನ್ನ ಮನೆಗೆ ದೂರವಾಣಿ ಕರೆ ಮಾಡಿ ಶೃಂಗೇರಿಯಲ್ಲಿರುವ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ಮಂಗಳವಾರ ಸಂದೀಪ್ ಅವರ ಮೊಬೈಲ್ ಸ್ವಿಚ್‍ಆಫ್ ಆಗಿದ್ದು, ಇದರಿಂದ ಆತಂಕಕೊಂಡ ಸಂದೀಪ್ ಪೋಷಕರು ಕ್ಯಾಲಿಕಟ್ ಪೊಲೀಸರಿಗೆ ದೂರು ನಿಡಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಅಲ್ಲಿನ ಪೊಲೀಸರು ಸಂದೀಪ್ ಅವರ ಕರೆ ಆಧರಿಸಿ ಮೊಬೈಲ್ ಲೊಕೇಶನ್ ಪರಿಶೀಲಿಸಿದಾಗ ಆತ ಶೃಂಗೇರಿ ಸಮೀಪದಲ್ಲೇ ಇರುವ ಬಗ್ಗೆ ತಿಳಿದಿದೆ. ಈ ಬಗ್ಗೆ ಮಾಹಿತಿ ಪಡೆದ ಕೊಪ್ಪ ತಾಲೂಕಿನ ಹರಿಹರ ಪುರ ಪೊಲೀಸರು ಶೋಧ ಆರಂಭಿಸಿದಾಗ ಮಂಗಳವಾರ ಸಂಜೆ ಸಂದೀಪ್ ಬೈಕ್ ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಲಾಪುರ ಗ್ರಾಮದ ತುಂಗಾ ನದಿ ತೀರದಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸಂದೀಪ್ ಸ್ನಾನ ಮಾಡಲು ನದಿಗಿಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿರಬಹುದೆಂದು ಶಂಕಿಸಿ ನದಿಯಲ್ಲಿ ಮುಳುಗು ತಜ್ಞರಿಂದ ಶೋಧ ಆರಂಭಿಸಿದ್ದಾರೆ. ಶೋಧ ಬುಧವಾರವೂ ಮುಂದಿವರಿದಿದ್ದು, ಸಂದೀಪ್ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಪತ್ರಿಕೆಗೆ ದೃಢಪಡಿಸಿವೆ.
ಈ ಮಧ್ಯೆ ಸಂದೀಪ್ ಅವರು ಉತ್ತಮ ಈಜುಪಟುವಾಗಿದ್ದು, ನದಿಯಲ್ಲಿ ಮುಳುಗಿ ಮೃತನಾಗುವು ಸಾಧ್ಯತೆ ಇಲ್ಲ ಎಂದು ಆತನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆಂದು ತಿಳಿದು ಬಂದಿದ್ದು, ಪ್ರವಾಸಿಗೆ ಸಂದೀಪ್ ಅವರನ್ನು ಯಾರಾದರೂ ಕಿಡ್ನಾಪ್ ಮಾಡಿರಬಹುದೆಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸಂದೀಪ್ ನಾಪತ್ತೆ ಪ್ರಕರಣ ಸ್ಥಳೀಯರು ಹಾಗೂ ಪೊಲೀಸರಲ್ಲಿ ಹಲವು ಶಂಕೆಗೆ ಕಾರಣವಾಗಿದೆ. ಸಂದೀಪ್ ಪತ್ತೆಗಾಗಿ ಕೇರಳ ಪೊಲೀಸರು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆ ಸಂಬಂಧ ಹರಿಹರಪುರ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.