ತಂತ್ರಜ್ಞಾನದ ಸದ್ಬಳಕೆಯು ಸುಸ್ಥಿರತೆಗೆ ದಾರಿ: ಸಚಿವ ಆರ್.ವಿ.ದೇಶಪಾಂಡೆ

Update: 2018-11-28 14:45 GMT

ಬೆಂಗಳೂರು, ನ. 28: ತಂತ್ರಜ್ಞಾನವು ಇಂದು ಜನಜೀವನಕ್ಕೆ ಹಲವು ಅನುಕೂಲಗಳನ್ನು ತಂದುಕೊಟ್ಟಿದೆ. ಆದರೆ, ವ್ಯಕ್ತಿಗಳ ಮಟ್ಟದ ಜತೆಗೆ ಉದ್ಯಮ ಮತ್ತು ಪರಿಸರದ ದೃಷ್ಟಿಯಿಂದ ಇದು ವಿರೋಧಾಭಾಸಗಳನ್ನೂ ಸೃಷ್ಟಿಸಿದೆ. ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡರೆ ಸಮಗ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.

ಬುಧವಾರ ನಗರದ ಖಾಸಗಿ ಹೊಟೇಲಿನಲ್ಲಿ ಏರ್ಪಡಿಸಿದ್ದ ‘ಗ್ಲೋಬಲ್ ಫೋರಂ ಆನ್ ಸ್ಟ್ರಾಟೆಜಿಕ್ ಚೇಂಜ್-ಲೀಡರ್‌ಶಿಪ್ ಅಂಡ್ ಲರ್ನಿಂಗ್’ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನವಿಂದು ಹಿಂದೆಂದೂ ಇಲ್ಲದಂತೆ ಒಬ್ಬರೊಬ್ಬರನ್ನು ಬೆಸೆದಿದೆ. ಆದರೆ, ಮನುಷ್ಯರ ನಡುವಿನ ಪರಸ್ಪರ ಬಾಂಧವ್ಯ ಶಿಥಿಲವಾಗಿರುವ ವೈರುಧ್ಯ ನಮ್ಮ ಮುಂದಿದೆ. ಸುತ್ತಲಿನ ಸಂಗತಿಗಳು ವ್ಯವಸ್ಥಿತವಾಗಿರುವಂತೆ ತೋರುತ್ತಿದ್ದರೂ ವಾಸ್ತವದಲ್ಲಿ ಕ್ಷೋಭೆಯ ವಾತಾವರಣವಿದೆ. ಜೀವನಮಟ್ಟ ಸುಧಾರಿಸಿರುವುದು ನಿಜವಾದರೂ ಬಡವ-ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ತಂತ್ರಜ್ಞಾನವು ಇವುಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದರು.

ತಂತ್ರಜ್ಞಾನ ರಂಗದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಅದ್ಭುತವಾದ ಜಗತ್ತಿನಲ್ಲಿ ನಾವೆಲ್ಲರೂ ಇದ್ದೇವೆ. ಆದರೆ, ಇದೆ ತಂತ್ರಜ್ಞಾನ ನಮ್ಮ ಭೂಗ್ರಹವನ್ನೆ ನಾಶ ಮಾಡುವ ಭೀತಿಯನ್ನೂ ನಾವು ಎದುರಿಸುತ್ತಿದ್ದೇವೆ. ಜನರ ಅಭ್ಯುದಯವೆ ಮುಖ್ಯ ಆಗಿರುವಂತಹ ನೀತಿಗಳನ್ನು ಜಾರಿಗೆ ತರುವುದೇ ಇದಕ್ಕೆ ಪರಿಹಾರ ಎಂದು ಅವರು ಸಲಹೆ ನೀಡಿದರು.

ತಂತ್ರಜ್ಞಾನವು ಅಂತಿಮವಾಗಿ ಜನರು ಘನತೆಯಿಂದ ಬದುಕಲು ಸಾಧ್ಯ ಆಗುವಂತಹ ಉದ್ಯೋಗಗಳನ್ನು ಸೃಷ್ಟಿಸಬೇಕು. ರಾಜ್ಯವನ್ನು ಸುಸ್ಥಿರ ಅಭಿವೃದ್ಧಿ ಮಾದರಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಿಸಬೇಕೆಂಬುದೆ ಸರಕಾರದ ಗುರಿ. ಇದರ ಜತೆಯಲ್ಲೇ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆಯ ಬಲವರ್ಧನೆಗೂ ಇದು ಕಾರಣವಾಗಬೇಕು ಎಂದು ಅವರು ನುಡಿದರು.

ತಂತ್ರಜ್ಞಾನದಿಂದಾಗಿ ಸಾರ್ವಜನಿಕ ವ್ಯವಸ್ಥೆಯಲ್ಲಿ ಒಂದು ಮಟ್ಟದ ಪಾರದರ್ಶಕತೆ ಬಂದಿದೆ. ವಿದ್ಯುನ್ಮಾನ ಆಡಳಿತವು ಸರಕಾರದ ಪಾತ್ರವನ್ನು ಸರಳಗೊಳಿಸುತ್ತಿದೆ. ಇದನ್ನು ಮನಗಂಡೆ ಸರಕಾರವು ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನವನ್ನು ವ್ಯಾಪಕ ಪ್ರಮಾಣದಲ್ಲಿ ಬಳಸುತ್ತಿದೆ ಎಂದು ದೇಶಪಾಂಡೆ ವಿವರಿಸಿದರು.

ರಾಜಕೀಯ ನಾಯಕರು, ಉದ್ಯಮಪತಿಗಳು ಮತ್ತು ನಾಗರಿಕ ಸಮಾಜದ ಧುರೀಣರೆಲ್ಲರೂ ಇಂದು ನಮ್ಮ ಮುಂದಿರುವ ಜಾಗತಿಕ ಒತ್ತಡಗಳನ್ನು ಗಮನಿಸಿ, ಅದಕ್ಕೆ ತಕ್ಕಂತೆ ನಾಯಕತ್ವವನ್ನು ಒದಗಿಸಬೇಕು. ಇಲ್ಲದಿದ್ದರೆ ತಂತ್ರಜ್ಞಾನವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವುದು ಸಾಧ್ಯವಾಗುವುದಿಲ್ಲ ಎಂದು ದೇಶಪಾಂಡೆ ಎಚ್ಚರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News