×
Ad

ಸಕಲ ಸರಕಾರಿ ಗೌರವಗಳೊಂದಿಗೆ ಶಾಸಕ ಹೆಚ್.ಎಸ್.ಪ್ರಕಾಶ್ ಅಂತ್ಯಕ್ರಿಯೆ

Update: 2018-11-28 23:34 IST

ಹಾಸನ,ನ.28: ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅಂತ್ಯಕ್ರಿಯೆಯು ತಾಲೂಕಿನ ಶಾಂತಿಗ್ರಾಮ ಹೋಬಳಿ, ಕೆ. ಆಲದಹಳ್ಳಿಯಲ್ಲಿರುವ ತಮ್ಮ ತೋಟದ ಜಾಗದಲ್ಲಿ ಬುಧವಾರ ಸಂಜೆ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಮಂಗಳವಾರ ಬೆಳಿಗ್ಗೆ ನಿಧರಾದ ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಮೃತ ದೇಹವನ್ನು ಹಾಸನ ನಗರಕ್ಕೆ ಬಂದಾಗ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ನಂತರ ರಿಂಗ್ ರಸ್ತೆಯಲ್ಲಿರುವ ಶ್ರೀರಂಗ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಟ್ಟು, ಬುಧವಾರ ಮದ್ಯಾಹ್ನ ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮಾಜಿ ಶಾಸಕರ ತೋಟದ ಜಮೀನು ಕೆ. ಆಲದಹಳ್ಳಿಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಕುಂದೂರು ಮಠದ ಶಿವಪುತ್ರನಾಥ ಸ್ವಾಮೀಜಿ, ಮಾಜಿ ಪ್ರಧಾನಿ ಹಾಗೂ ಸಂಸದ ಹೆಚ್.ಡಿ. ದೇವೇಗೌಡ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ, ಪತ್ನಿ ಹಾಗೂ ಜಿಪಂ ಸದಸ್ಯೆ ಭವಾನಿ ರೇವಣ್ಣ, ಪುತ್ರ ಪ್ರಜ್ವಲ್ ರೇವಣ್ಣ, ಶಾಸಕ ಹೆಚ್.ಕೆ. ಕುಮಾರಸ್ವಾಮಿ, ಮಾಜಿ ಶಾಸಕ ಕೋನರೆಡ್ಡಿ, ವಿಧಾನಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡ ಕೆ.ಎಂ. ರಾಜೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ.ಆರ್. ಶಂಕರ್, ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎನ್.ಪ್ರಕಾಶ್‍ಗೌಡ ಸೇರಿದಂತೆ ಗಣ್ಯರು ಮೃತ ಪ್ರಕಾಶ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಮಾಜಿ ಶಾಸಕ ಹೆಚ್.ಎಸ್. ಪ್ರಕಾಶ್ ಅವರ ಸೋಹದರ ಹಾಗೂ ಮಾಜಿ ನಗರಸಭಾ ಅಧ್ಯಕ್ಷ ಹೆಚ್.ಎಸ್. ಅನಿಲ್ ಕುಮಾರ್, ಮತ್ತೊರ್ವ ಸಹೋದರ ದೇವೇಂದ್ರ ಹಾಗೂ ಮಾಜಿ ಶಾಸಕರ ಪುತ್ರ ಹಾಗೂ ಜಿಪಂ ಸದಸ್ಯ ಸ್ವರೂಪ್, ಮತ್ತೋರ್ವ ಪುತ್ರ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರು ವಿಧಿವಿಧಾನದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದರು. ಈ ಸಮಯದಲ್ಲಿ ಮೃತದೇಹ ನೋಡುತ್ತಿದ್ದಂತೆ ಹೆಚ್.ಡಿ.ರೇವಣ್ಣ ರವರು ಕಣ್ಣೀರಿಡುತ್ತಲೇ ನಮನ ಸಲ್ಲಿಸಿದರು. ಈ ವೇಳೆ ನಿಧನರಾದ ಮಾಜಿ ಶಾಸಕರಿಗೆ ಪೊಲೀಸ್ ಇಲಾಖೆಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸೂಚಿಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಹೆಚ್.ಎಸ್.ಪ್ರಕಾಶ್ ರವರು ಒಳ್ಳೆಯ ರಾಜಕಾರಣಿಯಾಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕ ಸೇವೆ ಸಲ್ಲಿಸಿದ್ದಾರೆ. ಇಂದು ನಮ್ಮ ಜೊತೆ ಅವರು ಇಲ್ಲ. ನಾನು 25 ವರ್ಷದ ಗೆಳೆಯನನ್ನು ಕಳೆದುಕೊಂಡಿರುವುದಾಗಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News