ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ: ಡಿ.23ಕ್ಕೆ ಕಾನ್‌ಸ್ಟೇಬಲ್ ಲಿಖಿತ ಪರೀಕ್ಷೆ
ಬೆಂಗಳೂರು, ನ.29: ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ರದ್ದಾಗಿದ್ದ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಡಿ.23ರಂದು ನಿಗದಿ ಮಾಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.
ಖಾಲಿಯಿದ್ದ 2,113 ಪೇದೆಗಳ ಹುದ್ದೆಗೆ ನ.25ರಂದು ರಾಜ್ಯವ್ಯಾಪಿ ಲಿಖಿತ ಪರೀಕ್ಷೆ ಎಂದು ನಿಗದಿ ಮಾಡಲಾಗಿತ್ತು. ನ.25ರಂದು ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದು ಬೆಳಕಿಗೆ ಬಂದಿದ್ದು, ಸಿಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಿಂಗ್‌ಪಿನ್ ಶಿವಕುಮಾರ್, 116 ಅಭ್ಯರ್ಥಿಗಳು ಸೇರಿ 120 ಮಂದಿಯನ್ನು ಬಂಧಿಸಿ, ಪೊಲೀಸ್ ನೇಮಕಾತಿ ಹಾಗೂ ತರಬೇತಿ ವಿಭಾಗ ಅಧಿಕಾರಿಗಳು ಪರೀಕ್ಷೆ ರದ್ದು ಮಾಡಿದ್ದರು. ಪ್ರಾಥಮಿಕ ತನಿಖೆಯ ಮೂಲಕ ತಿಳಿಯುವ ಮಾಹಿತಿ ಪ್ರಕಾರ ಶಿವಕುಮಾರ್ 6ರಿಂದ 8 ಲಕ್ಷಕ್ಕೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡುತ್ತಿದ್ದ. ಈ ಹಗರಣಕ್ಕೆ ಸಂಬಂಧಿಸಿದಂತೆ 4 ಮಿನಿ ಬಸ್ ಚಾಲಕರು, ಇನ್ನೋವಾ ಕಾರು ಚಾಲಕ ಮತ್ತು ಲಾರಿ ಕ್ಲೀನರ್‌ಗಳನ್ನು ವಿಚಾರಣೆಗೊಳಪಡಿಸಲಾಗಿದೆ.
ಇದೀಗ ರಾಜ್ಯದ 24 ಜಿಲ್ಲೆಗಳಲ್ಲಿ ಡಿ.23ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಪ್ರಕರಣದ ಪ್ರಮುಖ ಆರೋಪಿ ಪೇದೆ ಬಸವರಾಜು ಇನ್ನೂ ಸಿಕ್ಕಿಲ್ಲ, ಈತನ ಜತೆಗೆ ಕೆಲ ಪೊಲೀಸ್ ಅಧಿಕಾರಿಗಳು ಅಕ್ರಮದಲ್ಲಿ ತೊಡಗಿರುವ ಕುರಿತು ತನಿಖಾಧಿಕಾರಿಗಳಿಗೆ ಸುಳಿವು ಸಿಕ್ಕಿದೆ. ಶಿವಕುಮಾರ್ ಸೇರಿ ಒಟ್ಟು 9 ಮಂದಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.