ಡಿಕೆಶಿ-ಬಿಎಸ್‌ವೈ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ: ಸಚಿವ ಕೃಷ್ಣಭೈರೇಗೌಡ
ಬಾಗಲಕೋಟೆ, ನ. 29: ಸಚಿವ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಯಡಿಯೂರಪ್ಪ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗಳ ವಿಚಾರಕ್ಕೆ ಭೇಟಿ ಮಾಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮದವರ ಕಲ್ಪನೆ ರೀತಿಯಲ್ಲಿ ಏನೂ ಆಗಿಲ್ಲ. ಯಡಿಯೂರಪ್ಪ ಅವರೊಬ್ಬ ಜನ ಪ್ರತಿನಿಧಿಯಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
‘ಆಪರೇಷನ್ ಕಮಲ’ ಎಂದು ಹೇಳುತ್ತಲೇ ಮೈತ್ರಿ ಸರಕಾರ ಆರು ತಿಂಗಳ ಪೂರೈಸಿದ್ದು, ಐದು ವರ್ಷದ ಅಧಿಕಾರಾವಧಿಯನ್ನು ಸರಕಾರ ಪೂರ್ಣಗೊಳಿಸಲಿದೆ ಎಂದ ಅವರು, ರಾಜ್ಯದ ಜನರ ಭಾವನೆಗೆ ತಕ್ಕಂತೆ ರಾಜ್ಯದ ಆಡಳಿತ ಚುರುಕುಗೊಳಿಸಿ ಮುನ್ನಡೆಯುತ್ತೇವೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ಡಿ.10ರ ಚಳಿಗಾಲದ ಅಧಿವೇಶನಕ್ಕೆ ಮೊದಲೆ ಸಚಿವ ಸಂಪುಟ ವಿಸ್ತರಣೆ ಮಾಡುವ ಪ್ರಯತ್ನದಲ್ಲಿದ್ದು, ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷದ ಮುಖಂಡರು ಒಮ್ಮತ ವ್ಯಕ್ತಪಡಿಸಿದ್ದು, ಶೀಘ್ರದಲ್ಲೆ ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ತಿಳಿಸಿದರು.