ದೇಶದ ಪ್ರಧಾನಿಯಾಗಲು ರಾಹುಲ್ ಬ್ರಾಹ್ಮಣರಾಗುವುದು ಅನಿವಾರ್ಯವೇ?

Update: 2018-11-30 03:50 GMT

ಯುಪಿಎ ನೇತೃತ್ವದ ಮೂಲಕ ಈ ದೇಶದ ಪ್ರಧಾನಿಯಾಗುವುದಕ್ಕೆ ಎಲ್ಲ ಅರ್ಹತೆಗಳಿದ್ದರೂ ವಿರೋಧ ಪಕ್ಷ ಮತ್ತು ಸಂಘಪರಿವಾರದ ಸಂಚಿನ ಫಲವಾಗಿ ಸೋನಿಯಾಗಾಂಧಿ ಆ ಸ್ಥಾನದಿಂದ ಹಿಂದೆ ಸರಿಯಬೇಕಾಯಿತು. ಒಬ್ಬ ಭಾರತೀಯ ನಾರಿಯಾಗಿ ಈ ದೇಶಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದರೂ ಸೋನಿಯಾಗಾಂಧಿ ‘ಭಾರತೀಯಳು’ ಎಂದು ಗುರುತಿಸುವುದಕ್ಕೆ ಇನ್ನೂ ಒದ್ದಾಡಬೇಕಾಗಿದೆ. ಈ ಅಸ್ಮಿತೆಯ ಸಮಸ್ಯೆ ಇದೀಗ ತಾಯಿಯಿಂದ ಮಗನಿಗೆ ವರ್ಗಾವಣೆಯಾದಂತಿದೆ. ಈ ದೇಶದ ಪ್ರಧಾನಿಯಾಗಲು ತಾನು ‘ಬ್ರಾಹ್ಮಣ’ ಎನ್ನುವುದು ಸಾಬೀತು ಪಡಿಸುವುದು ಅನಿವಾರ್ಯ ಎಂದು ರಾಹುಲ್ ಗಾಂಧಿ ಬಲವಾಗಿ ನಂಬಿದ್ದಾರೆ ಮತ್ತು ತನ್ನ ಗೋತ್ರ, ನಕ್ಷತ್ರಗಳನ್ನು ಮುಂದಿಟ್ಟುಕೊಂಡು ತಾನೂ ಬ್ರಾಹ್ಮಣ ಎಂದು ಬಹಿರಂಗವಾಗಿ ಹೇಳಿಕೊಳ್ಳಲು ಶುರುಹಚ್ಚಿದ್ದಾರೆ. ಅದಕ್ಕಾಗಿ ಬ್ರಾಹ್ಮಣ ಸನ್ಯಾಸಿಗಳ ಸಹಾಯವನ್ನೂ ಪಡೆಯುತ್ತಿದ್ದಾರೆ. ಇತ್ತ, ಬಿಜೆಪಿ ಮತ್ತು ಸಂಘಪರಿವಾರದವರು ರಾಹುಲ್‌ಬ್ರಾಹ್ಮಣರಲ್ಲ ಎನ್ನುವುದನ್ನು ನಿರೂಪಿಸಲು ಉತ್ಸುಕರಾಗಿ ನಿಂತಿದ್ದಾರೆ. ಪ್ರಶ್ನೆ ಇರುವುದು, ರಾಹುಲ್ ಪ್ರಧಾನಮಂತ್ರಿಯಾಗಬೇಕಾದರೆ ಅವರು ‘ಬ್ರಾಹ್ಮಣ’ರಾಗಿರುವುದು ಕಡ್ಡಾಯವೇ? ರಾಹುಲ್‌ಗಾಂಧಿಯವರು ಯಾಕೆ ತಮ್ಮನ್ನು ತಾವು ಬ್ರಾಹ್ಮಣರೆಂದು ಘೋಷಿಸಲು ಪ್ರಯತ್ನ ಪಡುತ್ತಿದ್ದಾರೆ. ಈ ದೇಶವನ್ನು ಇನ್ನೂ ಹೇಗೆ ಜಾತಿ ಅದರಲ್ಲೂ ಬ್ರಾಹ್ಮಣ ಮನಸ್ಸು ಆಳುತ್ತಿದೆ ಎನ್ನುವುದಕ್ಕೆ ರಾಹುಲ್ ಗಾಂಧಿಯ ‘ಬ್ರಾಹ್ಮಣ’ ಮತಾಂತರ ಪ್ರಯತ್ನವೇ ದೊಡ್ಡ ಉದಾಹರಣೆ. ಈ ಮೂಲಕ ಸಂಘಪರಿವಾರ ಮತ್ತು ಮನುವಾದಿ ಶಕ್ತಿಗಳು ತೋಡಿದ ಹೊಂಡಕ್ಕೆ ರಾಹುಲ್‌ಗಾಂಧಿ ತಾವಾಗಿಯೇ ಹೋಗಿ ಬಿದ್ದಿದ್ದಾರೆ.

 ತಮ್ಮನ್ನು ತಾವು ಬ್ರಾಹ್ಮಣರೆಂದು ನಿರೂಪಿಸಲು ಹೊರಟಿರುವ ರಾಹುಲ್‌ಗಾಂಧಿ ಆ ಮೂಲಕ ಬ್ರಾಹ್ಮಣ್ಯದ ಶ್ರೇಷ್ಠತೆ ಮತ್ತು ಅದರ ರಾಜಕೀಯ ಶಕ್ತಿಯನ್ನು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್‌ಗಾಂಧಿಯ ಗೋತ್ರವನ್ನು ಕೇಳಿದವರಿಗೆ, ಅದನ್ನೇ ತಿರುಗುಬಾಣವಾಗಿ ರಾಹುಲ್‌ಗಾಂಧಿ ಪ್ರಯೋಗಿಸಬಹುದಿತ್ತು. ತನ್ನಂತಹ ನಾಯಕನಿಗೇ ದೇವಸ್ಥಾನ ಪ್ರವೇಶಿಸುವುದಕ್ಕೆ ಅಡ್ಡಿ ಪಡಿಸುವವರು ಈ ದೇಶದ ಶೂದ್ರ, ದಲಿತರ ಪ್ರವೇಶವನ್ನು ಒಪ್ಪುವುದು ಸಾಧ್ಯವೇ ಎನ್ನುವುದನ್ನು ಮುಂದಿಟ್ಟುಕೊಂಡು ಚರ್ಚೆಯನ್ನು ವಿಸ್ತರಿಸಬಹುದಿತ್ತು. ಸಂಘಪರಿವಾರ ಮತ್ತು ಬಿಜೆಪಿಯೊಳಗಿರುವ ಬ್ರಾಹ್ಮಣ್ಯ ಮನಸ್ಥಿತಿಯನ್ನು ಟೀಕಿಸಬಹುದಿತ್ತು. ಆದರೆ ರಾಹುಲ್ ತಾನು ಹಿಂದೂ, ಅಷ್ಟೇ ಅಲ್ಲ ಅವರಲ್ಲಿ ಶ್ರೇಷ್ಠ ಜಾತಿಯಾಗಿರುವ ಬ್ರಾಹ್ಮಣ ಎನ್ನುವುದನ್ನು ದೇಶದ ಜನರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ. ಸಂಘಪರಿವಾರ ದೇಶಾದ್ಯಂತ ಬಿತ್ತಿರುವ ಸುಳ್ಳು ಮತ್ತು ಭ್ರಮೆಗಳಿಗೆ ರಾಹುಲ್ ಈ ಮೂಲಕ ಬಲಿಯಾಗಿದ್ದಾರೆ. ಒಂದು ವೇಳೆ ರಾಹುಲ್ ಗಾಂಧಿಯವರು ನಿಜಕ್ಕೂ ಬ್ರಾಹ್ಮಣರೇ ಎಂದಿಟ್ಟುಕೊಳ್ಳೋಣ. ಅದು ಅವರ ಅರ್ಹತೆಯನ್ನು ಯಾವ ರೀತಿಯಲ್ಲಿ ಹೆಚ್ಚಿಸಬಹುದು? ನೆಹರೂ ಕುಟುಂಬದ ಹಿರಿಮೆಯಿರುವುದೇ ಅದನ್ನು ಸುತ್ತಿಕೊಂಡಿರುವ ಜಾತ್ಯತೀತ ಅಸ್ಮಿತೆಯಿಂದ. ನೆಹರೂ ಯಾವುದೇ ಧರ್ಮೀಯರಿರಲಿ, ಜಾತ್ಯತೀತ ತತ್ವದಲ್ಲಿ ಅಪಾರ ಗೌರವವಿರಿಸಿದವರು. ಅದರ ತಳಹದಿಯಲ್ಲಿ ದೇಶವನ್ನು ಕಟ್ಟಲು ಮುಂದಾದ ಕಾರಣದಿಂದಲೇ ಈ ದೇಶ ಇಂದು ವಿಶ್ವದಲ್ಲಿ ತಲೆಯೆತ್ತಿ ನಿಂತಿದೆ. ನೆಹರೂ ಕುಟುಂಬದ ಹೆಗ್ಗಳಿಕೆಯಿರುವುದು ಅವರು ಬ್ರಾಹ್ಮಣ ಜಾತಿಗೆ ಸೇರಿದವರು ಎಂದಲ್ಲ. ಅವರ ಕುಟುಂಬ ಎಲ್ಲ ಜಾತಿ ಧರ್ಮವನ್ನು ತನ್ನೊಳಗೆ ಬೆಸೆದುಕೊಂಡಿದೆ ಎನ್ನುವ ಕಾರಣಕ್ಕಾಗಿ. ಮುಸ್ಲಿಮ್, ಪಾರ್ಸಿ, ಬ್ರಾಹ್ಮಣ, ಕ್ರಿಶ್ಚಿಯನ್ ಎಲ್ಲ ಧರ್ಮಕ್ಕೆ ಸೇರಿದವರನ್ನೂ ಆ ಕುಟುಂಬ ತನ್ನ ಸದಸ್ಯರನ್ನಾಗಿ ಸೇರಿಸಿದೆ. ಪಾರ್ಸಿ ಧರ್ಮಕ್ಕೆ ಸೇರಿದ ಫಿರೋಝ್‌ಗಾಂಧಿಯನ್ನು ಮದುವೆಯಾದುದಕ್ಕೆ ಇಂದಿರಾಗಾಂಧಿಗೆ ದೇವಸ್ಥಾನದಲ್ಲಿ ಪ್ರವೇಶ ಸಿಗಲಿಲ್ಲ. ಹಾಗೆಂದು ಯಾವತ್ತೂ ಭಾರತೀಯರು ಇಂದಿರಾಗಾಂಧಿಯ ಕೈ ಬಿಟ್ಟಿರಲಿಲ್ಲ. ಆಕೆ ಎಂದಿಗೂ ತನ್ನನ್ನು ತಾನು ಹಿಂದೂ, ಬ್ರಾಹ್ಮಣ ಎಂದು ಸಾಬೀತು ಮಾಡಲು ಹೊರಡಲಿಲ್ಲ. ಒಂದು ರೀತಿಯಲ್ಲಿ ಇಡೀ ಭಾರತವನ್ನು ನೆಹರೂ ಕುಟುಂಬ ಪ್ರತಿನಿಧಿಸುತ್ತಿದೆ. ರಾಹುಲ್‌ನದು ಯಾವ ಧರ್ಮ, ಯಾವ ಜಾತಿ? ಅವರು ಮುಸ್ಲಿಮರೋ ಎಂದು ಕೇಳಿದರೆ ಮುಸ್ಲಿಮರೂ ಹೌದು. ಪಾರ್ಸಿಯಾಗಿರಬಹುದು ಎಂದರೆ ಇಲ್ಲ ಎನ್ನಲಾಗದು. ತಾಯಿ ಕ್ರಿಶ್ಚಿಯನ್. ಅಜ್ಜ ಬ್ರಾಹ್ಮಣ. ಇನ್ನೋರ್ವ ಅಜ್ಜ ಪಾರ್ಸಿ. ಭಾರತದ ವೈವಿಧ್ಯಗಳೆಲ್ಲವೂ ರಾಹುಲ್‌ಗಾಂಧಿಯೊಳಗಿದೆ. ಈ ವೈವಿಧ್ಯಗಳನ್ನು ಕಳಚಿಕೊಂಡು ತಾನು ‘ಬ್ರಾಹ್ಮಣ’ ಎಂದು ಸಾಬೀತು ಮಾಡಲು ಹೊರಡುವುದರಿಂದ ರಾಹುಲ್‌ಗಾಂಧಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಬಹುಶಃ ಬಿಜೆಪಿ ಮತ್ತು ಸಂಘಪರಿವಾರಕ್ಕೂ ಇದೇ ಬೇಕಾಗಿದೆ. ನೆಹರೂ ಕುಟುಂಬದೊಳಗಿರುವ ಬಹುತ್ವವನ್ನು ನಾಶ ಮಾಡಿ, ರಾಹುಲ್‌ಗಾಂಧಿ ಮೂಲಕವೇ ಆ ಕುಟುಂಬವನ್ನು ಬ್ರಾಹ್ಮಣ ಕುಟುಂಬವಾಗಿ ಪರಿವರ್ತಿಸುವುದು ಅವರ ಸಂಚಾಗಿದೆ. ಅದರಲ್ಲಿ ಅವರು ಭಾಗಶಃ ಯಶಸ್ಸನ್ನು ಪಡೆದಿದ್ದಾರೆ.

 ಭಾರತಕ್ಕೆ ಸೊಸೆಯಾಗಿ ಬಂದ ಸೋನಿಯಾಗಾಂಧಿ ಯಾವುದೇ ಭಾರತೀಯನಾರಿಗಿಂತ ಕಡಿಮೆಯಿಲ್ಲದಂತೆ ತನ್ನ ಕರ್ತವ್ಯವನ್ನು, ಹೊಣೆಗಾರಿಕೆಗಳನ್ನು ನಿರ್ವಹಿಸಿದರು. ಈ ದೇಶಕ್ಕಾಗಿ ತನ್ನ ಪತಿಯನ್ನು ಕಳೆದುಕೊಂಡರು. ಕಾಂಗ್ರೆಸ್ ಇನ್ನೇನು ಛಿದ್ರವಾಗುತ್ತದೆ ಎನ್ನುವಾಗ ಅದರ ನೇತೃತ್ವವನ್ನು ವಹಿಸಿದರು. ಜಾತ್ಯತೀತ ವೌಲ್ಯಗಳನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಲು ಬಹಳಷ್ಟು ಪ್ರಯತ್ನ ಪಟ್ಟರು. ಕಾಂಗ್ರೆಸ್‌ನೊಳಗಿರುವ ಬ್ರಾಹ್ಮಣ್ಯ ಸಂಚುಗಳ ಅರಿವಿದ್ದೂ ಅವೆಲ್ಲವನ್ನೂ ದಾಟುತ್ತಾ ನಿಜವಾದ ನಾಯಕಿಯಾಗಿ ರೂಪುಗೊಂಡರು. ತನ್ನ ಇಟಲಿ ಮೂಲ ಭಾರತೀಯರ ಭಾವನೆಗಳಿಗೆ ಧಕ್ಕೆ ತರಬಹುದು ಎನ್ನುವ ಭಯದಿಂದ ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ, ಮನಮೋಹನ್ ಸಿಂಗ್‌ರಂತಹ ಮುತ್ಸದ್ದಿಯನ್ನು ದೇಶದ ಪ್ರಧಾನಿಯಾಗಿಸಿದರು. ಸಿಂಗ್‌ರ ಬೆನ್ನಿಗೆ ನಿಂತು ಸರಕಾರವನ್ನು ಮುನ್ನಡೆಸಿದರು. ಆಹಾರ ಭದ್ರತೆಯ ಹಕ್ಕು, ಉದ್ಯೋಗ ಭದ್ರತೆ, ಮಾಹಿತಿ ಹಕ್ಕು ಮೊದಲಾದ ಮಹತ್ವದ ಕಾಯ್ದೆಗಳು ಜಾರಿಯಾದುದು ಸೋನಿಯಾಗಾಂಧಿಯ ಮಾರ್ಗದರ್ಶನದಲ್ಲಿ. ಇಷ್ಟಾದರೂ ಬಿಜೆಪಿ ಮತ್ತು ಸಂಘಪರಿವಾರ ಸೋನಿಯಾಗಾಂಧಿಯ ವಿದೇಶಿ ಮೂಲವನ್ನು ರಾಜಕೀಯ ಕಾರಣಗಳಿಗಾಗಿ ಕೆದಕುತ್ತಲೇ ಇದೆ. ಹಾಗೆಂದು, ರಾಹುಲ್‌ಗಾಂಧಿಯವರು ತಾವು ಬ್ರಾಹ್ಮಣರಾಗುವುದಕ್ಕಾಗಿ ಸೋನಿಯಾಗಾಂಧಿಯ ಜೊತೆಗಿನ ಸಂಬಂಧವನ್ನು ಕಡಿದು ಕೊಳ್ಳುತ್ತಾರೆಯೇ? ಸೋನಿಯಾಗಾಂಧಿಯಂತಹ ನಾಯಕಿಯ ಪುತ್ರ, ಇಂದಿರಾಗಾಂಧಿಯಂತಹ ಮಹಾನ್ ನಾಯಕಿಯ ಮೊಮ್ಮಗ, ಜವಾಹರಲಾಲ್‌ರಂತಹ ಸ್ವಾತಂತ್ರ ಹೋರಾಟಗಾರ, ದೇಶದ ಮೊತ್ತ ಮೊದಲ ಪ್ರಧಾನಿಯ ವಂಶಸ್ಥ ಎನ್ನುವುದು ರಾಹುಲ್‌ಗಾಂಧಿಯ ಹೆಗ್ಗಳಿಕೆಯಾಗಿದೆ. ಆ ಕುಟುಂಬದೊಳಗಿರುವ ವಿವಿಧ ಜಾತಿ, ಧರ್ಮಗಳ ವೈವಿಧ್ಯ ರಾಹುಲ್‌ಗೆ ನೆಹರೂ ಕುಟುಂಬ ಕೊಟ್ಟ ಅತಿ ದೊಡ್ಡ ಕೊಡುಗೆ. ಇವೆಲ್ಲವನ್ನು ಕಳಚಿಟ್ಟು ಯಾವುದೋ ಒಂದು ಬ್ರಾಹ್ಮಣ ಧರ್ಮದ ಉಪಜಾತಿಯೊಳಗೆ ಗುರುತಿಸುವ ದೌರ್ಭಾಗ್ಯ ರಾಹುಲ್‌ಗಾಂಧಿಗೆ ಬರಬಾರದು. ತನ್ನ ಕುಟುಂಬವೇ ಒಂದು ಭಾರತ ಎನ್ನುವುದನ್ನು ಮನದಲ್ಲಿಟ್ಟುಕೊಂಡು ಅವರು ಜನರನ್ನು ತಲುಪಬೇಕಾಗಿದೆ. ಆ ಪ್ರಬುದ್ಧತೆಯನ್ನು ಅವರು ಬೆಳೆಸಿಕೊಳ್ಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News